ಕುಡಿವನೀರು ಸೌಲಭ್ಯ ಕಲ್ಪಿಸುವುದು ಜವಾಬ್ದಾರಿ, ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಅಭಿಪ್ರಾಯ ಜಲಸಂಗ್ರಹಗಾರ ನಿರ್ಮಾಣಕ್ಕೆ ಭೂಮಿ ಪೂಜೆ

16 Nela Ph 02 Gudali Pooje
Published on

ನೆಲಮಂಗಲ: ಸಾರ್ವಜನಿಕರಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಪ್ರತಿಯೊಬ್ಬ ಜನಪ್ರತಿನಿಧಿ ಮತ್ತು ಅಧಿಕಾರಿಯ ಕರ್ತವ್ಯ ಎಂದು ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ತಿಳಿಸಿದರು.

ನಗರದ ಗಜಾರಿಯ ಬಡಾವಣೆಯಲ್ಲಿ ನಗರಸಭೆ ಬುಧವಾರ ಆಯೋಜಿಸಿದ್ದ ಭೂಮಟ್ಟದ ಜಲಸಂಗ್ರಹಗಾರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನಾಲ್ಕು ಗ್ರಾಪಂಗಳನ್ನು ವಿಲೀನಗೊಳಿಸಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ನಗರ ಪ್ರದೇಶದಲ್ಲಿ ಲಕ್ಷಾಂತರ ಜನರು ವಾಸವಾಗಿದ್ದು, ಅವರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕಾಗಿದೆ. ಎತ್ತಿನಹೊಳೆ ಯೋಜನೆಯಡಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ನಗರದ ದಾದಾಪೀರ್ ಬಡಾವಣೆಯಲ್ಲಿ 2.50 ಲಕ್ಷ ಲೀಟರ್ ಸಾಮರ್ಥ್ಯ, ವಾರ್ಡ್ 18ರಲ್ಲಿ ಅಂದಾಜು 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ಮತ್ತು ಗಜಾರಿಯ ಬಡಾವಣೆಯಲ್ಲಿ 2 ಲಕ್ಷ ಲೀಟರ್ ಸಾಮರ್ಥ್ಯ, ಬಿಲಾಲ್‌ನಗರದಲ್ಲಿ 2 ಲಕ್ಷದ ಲೀಟರ್ ಸಾಮರ್ಥ್ಯದ ಭೂಮಟ್ಟದ ಜಲಸಂಗ್ರಹಗಾರವನ್ನು ಅಂದಾಜು 1.82 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಗರಸಭೆ ಸದಸ್ಯರಾದ ಎನ್. ಗಣೇಶ್, ಎನ್.ಅಂಜಿನಪ್ಪ, ಗಂಗಾಧರ್‌ರಾವ್, ಜಿ. ಆನಂದ್, ಎ. ಪುರುಷೋತ್ತಮ್, ನಾಮನಿರ್ದೇಶಿತ ಸದಸ್ಯರಾದ ವಸಂತ್, ರವಿ, ರಾಜಮ್ಮ, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಪಿ. ಹೇಮಂತ್‌ಕುಮಾರ್, ಟಿಎಪಿಎಂಎಸ್‌ಎಸ್ ನಿರ್ದೇಶಕ ಪಿಳ್ಳಪ್ಪ, ಬಿ. ನರಸಿಂಹಮೂರ್ತಿ, ಮುಖಂಡರಾದ ಮಾರೇಗೌಡ, ನರಸಿಂಹಮೂರ್ತಿ, ಮುನಿಯಪ್ಪ, ಸಹಾಯಕ ಇಂಜಿನಿಯರ್‌ಗಳಾದ ಅಭಿಲಾಷ್, ನಾಗರಾಜು, ಇಂಜಿನಿಯರ್ ಸುರೇಶ್ ರಾವ್, ಹಿರಿಯ ಆರೋಗ್ಯ ನಿರೀಕ್ಷಕ ಬಸವರಾಜು, ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net