

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೃತಿಯಿಂದ ಕೃತಿಗೆ ಬರವಣಿಗೆಯ ಕಲೆಯು ಹದಗೊಳ್ಳುತ್ತದೆ. ಆದರೆ ಅದಕ್ಕೆ ಅಪವಾದಗಳೆಂಬಂತೆ ಬಹುತೇಕ ಬರಹಗಾರರ ಚೊಚ್ಚಲ ಕೃತಿಗಳು ಪುರಸ್ಕಾರಕ್ಕೆ ಪಾತ್ರವಾಗಿವೆ ಎಂಬುದು ಶ್ಲಾಘನೀಯ ಎಂದು ಡಾ.ಎಂ.ಎಂ. ಕಲಬುರ್ಗಿ ಟ್ರಸ್ಟ್ ಅಧ್ಯಕ್ಷ ಡಾ. ವೀರಣ್ಣ ರಾಜೂರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭೂಮಿ ಪ್ರತಿಷ್ಠಾನ ಹಾಗೂ ಅರವಳದ ಪ್ರತಿಷ್ಠಾನದ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಶಸ್ತಿಗಳನ್ನು ಯಾರು ನೀಡುತ್ತಿದ್ದಾರೆ? ಯಾರು ಪಡೆಯುತ್ತಿದ್ದಾರೆ? ಎಂಬ ಯೋಚನೆಗಳ ಮೂಲಕ ಪುರಸ್ಕಾರಗಳ ಘನತೆ ಹೆಚ್ಚುತ್ತದೆ. ಪ್ರಶಸ್ತಿಗಳ ಮೊತ್ತ ಮುಖ್ಯವಲ್ಲ. ಬದಲಾಗಿ ಯಾವ ಸಂಸ್ಥೆ ನೀಡಿತು ಎಂಬುದರ ಮೂಲಕ ಪುರಸ್ಕಾರ ದೊಡ್ಡದಾಗಿತ್ತದೆ. ಪ್ರಶಸ್ತಿಗಳನ್ನು ಪಡೆಯುವ ಮೂಲಕ ಪಡೆದವರ ಜವಾಬ್ದಾರಿ ಹೆಚ್ಚುತ್ತದೆ ಎಂದರು.
ಡಾ. ಶ್ರೀಧರ ಹೆಗಡೆಭದ್ರನ್ ಮಾತನಾಡಿ, ಬಹುತೇಕ ಬರವಣಿಗೆಯ ಕೃಷಿಯಲ್ಲಿ ತೊಡಗಿದ ಬರಹಗಾರರ ಬೆಳೆಯು ಕವನ ಸಂಕಲನಗಳಾಗಿವೆ. ನಂತರದಲ್ಲಿ ಕಥೆ ಮತ್ತು ವಿಮರ್ಶಾ ಪ್ರಕಾರಗಳಿವೆ. ಪ್ರಸ್ತುತ ಭೂಮಿ ಸಾಹಿತ್ಯ ಪುರಸ್ಕಾರಕ್ಕೆ ಬಂದ ಕೃತಿಗಳಲ್ಲಿ ಕವನ ಸಂಕಲನದ್ದೇ ಅಗ್ರಪಾಲು. ಒಟ್ಟಾರೆ 76 ಕೃತಿಗಳಲ್ಲಿ ಒಂದು ಕೃತಿಗೆ ಬಹುಮಾನ ಸಿಕ್ಕಿದ್ದರೂ, ಟಾಪ್-10 ಕೃತಿಗಳೂ ಬಹುಮಾನ ಪಡೆದಂತೆ. ಎಲ್ಲ ಕೃತಿಗಳು ಗ್ರಾಮೀಣ ಭಾಷೆ, ವೈಚಾರಿಕತೆ, ಸಂವೇದನೆಗಳ ಮೂಲಕ ಓದುಗರ ಗಮನ ಸೆಳೆದಿವೆ ಎಂದರು.
ಡಾ.ಶಿವಾನಂದ ಟವಳಿ ಸಂಪಾದಿತ ಬೇವು-ಬೆಲ್ಲ ಕೃತಿ ಕುರಿತು ಶಶಿಧರ ತೋಡಕರ ಮಾತನಾಡಿದರು.
ಭೂಮಿ ಸಾಹಿತ್ಯ ಪುರಸ್ಕಾರವನ್ನು ‘ಅರ್ಧ ಬಿಸಿಲು ಅರ್ಧ ಮಳೆ’ ಕೃತಿಯ ಕಥೆಗಾರ ಸದಾಶಿವ ಸೊರಟೂರು ಅವರಿಗೆ ನೀಡಿ ಗೌರವಿಸಲಾಯಿತು. ದತ್ತಿದಾನಿ ಪರ ನೀಲವ್ವ ಅರವಳದ ಮಾತನಾಡಿದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ಭೂಮಿ ಪ್ರತಿಷ್ಠಾನದ ಗೌರವಾಧ್ಯಕ್ಷ ಶ್ರೀಶೈಲ ರಾಚಣ್ಣವರ, ಶಂಕರ ಹಲಗತ್ತಿ, ಮಹೇಂದ್ರಕುಮಾರ ಶಾಂತಗಿರಿ, ಡಾ.ಜಿನದತ್ತ ಹಡಗಲಿ, ಡಾ. ರಾಮು ಮೂಲಗಿ, ಜ್ಯೋತಿ ಪಾಟೀಲ, ಮುಂಜುಳಾ ಶಿವಾನಂದ, ಶ್ರೀಕಾಂತ ಪಾಟೀಲ, ಬಸವರಾಜ ಅರವಳದ, ಇತರರು ಇದ್ದರು.