ಕುಡಿವ ನೀರು ಪೂರೈಕೆಯಲ್ಲಿ ನಿರ್ಲಕ್ಷಿಸಿದರೆ ಹುಷಾರ್! ಜಿಪಂ ಸಿಇಒ ವಾರ್ನಿಂಗ್

CEO
ಕುಕನೂರು ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಮಾತನಾಡಿದರು. ತಾಪಂ ಇಒ ಸಂತೋಷ ಬಿರಾದಾರ್ ಪಾಟೀಲ್, ತಹಸೀಲ್ದಾರ್ ಎಚ್.ಪ್ರಾಣೇಶ್, ಗ್ರೇಡ್-2 ತಹಸೀಲ್ದಾರ್ ಮುರಳಿಧರಾವ್ ಕುಲಕರ್ಣಿ ಇದ್ದರು.
Published on

ಕುಕನೂರು: ಕುಡಿವ ನೀರು ಪೂರೈಕೆಯಲ್ಲಿ ನಿರ್ಲಕ್ಷಿಸದೆ ಕರ್ತವ್ಯ ನಿರ್ವಹಿಸಬೇಕು. ಗ್ರಾಮಕ್ಕೆ ಪೂರೈಕೆಯಾಗುವ ನೀರಿನ ಪರೀಕ್ಷೆಗೆ ಪ್ರತಿ ತಿಂಗಳು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷಿದರೆ ಕ್ರಮ ನಿಶ್ಚಿತ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಪಿಡಿಒಗಳಿಗೆ ಎಚ್ಚರಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಪಂಗೆ ಸಂಬಂಧಿಸಿದ ಕುಂದು-ಕೊರತೆಗಳ ಕುರಿತು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಮಂಗಳವಾರ ಅಹವಾಲು ಸ್ವೀಕರಿಸಿ, ಬಳಿಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕುಡಿವ ನೀರಿನ ಕುರಿತು ಮುಜಾಗ್ರತಾ ಕ್ರಮ ಕೈಗೊಳ್ಳಬೇಕು. ಈಗಾಗಲೇ ಆರೋಗ್ಯ ಇಲಾಖೆ ಪ್ರತಿ ತಿಂಗಳು ಆಯಾ ಗ್ರಾಪಂಗಳ ಕುಡಿವ ನೀರಿನ ಪರೀಕ್ಷೆ ನಡೆಸುತ್ತಿದೆ. ಈಗಾಗಲೇ ನೀರು ಪರೀಕ್ಷೆ ನಡೆಸಲು ಗ್ರಾಪಂಗೆ ಕಿಟ್ ನೀಡಲಾಗಿದೆ. ಗ್ರಾಮಗಳಿಗೆ ಪೂರೈಸುವ ಕುಡಿವ ನೀರಿನ್ನು ಪಿಡಿಒಗಳು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದರು.

ಸಮಸ್ಯೆ ಇರುವ ನೀರಿನ ಮೂಲವನ್ನು ತಕ್ಷಣ ಬಂದ್ ಮಾಡಬೇಕು. ಸಾರ್ವಜನಿಕರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಜಿಪಂ ಹಣ ನೀಡುತ್ತದೆ. ಗ್ರಾಮಗಳಲ್ಲಿ ಸೋರಿಕೆಯಾಗುವ ಪೈಪ್‌ಲೈನ್‌ಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಗ್ರಾಮದ ಓವರ್‌ಹೆಡ್ ಟ್ಯಾಂಕ್‌ಗಳನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಕುಡಿವ ನೀರಿನ ಬಗ್ಗೆ ದೂರುಗಳು ಬಂದಲ್ಲಿ ಅಂತಹ ಪಿಡಿಒಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಪಂ ಇಒ ಸಂತೋಷ ಬಿರಾದಾರ್ ಪಾಟೀಲ್, ತಹಸೀಲ್ದಾರ್ ಎಚ್.ಪ್ರಾಣೇಶ್, ಗ್ರೇಡ್-2 ತಹಸೀಲ್ದಾರ್ ಮುರಳೀಧರಾವ್ ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿ ಸುಮಾ ಪಾಟೀಲ್, ತಾಪಂ ಸಹಾಯಕ ನಿರ್ದೇಶಕ ವೆಂಕಟೇಶ ವಂದಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net