ಕಳ್ಳಸಾಗಾಣಿಕೆದಾರನ ಕೈಗೆ ಪಡಿತರ ಹಂಚಿಕೆ ಜವಾಬ್ದಾರಿ; ಹಂದಿಗನೂರ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

HANDIGANUR
ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಹಂದಿಗನೂರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Published on

ವಿಜಯಪುರ: ಬಡವರ ಅಕ್ಕಿಯನ್ನು ಕಳ್ಳ ಸಾಗಾಣಿಕೆ ಮಾಡಿ ಸಿಕ್ಕಿ ಬಿದ್ದಿದ್ದ ವ್ಯಕ್ತಿಗೆ ಪುನಃ ಪಡಿತರ ಹಂಚಿಕೆ ಮಾಡಲು ಅವಕಾಶ ಕಲ್ಪಿಸಿರುವ ತಾಲೂಕು ಆಡಳಿತದ ವಿರುದ್ಧ ಆಕ್ರೋಶಗೊಂಡಿರುವ ಸಾರ್ವಜನಿಕರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬೃಹತ್ ಮೆರವಣಿಗೆ ಮೂಲಕ ಆಗಮಿಸಿದ ನೂರಾರು ಫಲಾನುಭವಿಗಳು ಜಿಲ್ಲಾಡಳಿತ ಕಚೇರಿಗೆ ಆಗಮಿಸಿ ಕೆಲ ಕಾಲ ಪ್ರತಿಭಟನೆ ನಡೆಸಿದರು. ಸಿಂದಗಿ ತಾಲೂಕು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಪಡಿತರ ಕಳ್ಳಸಾಗಾಣಿಕೆ ಮಾಡಿ ಸಿಕ್ಕಿ ಬಿದ್ದಿರುವ ವ್ಯಕ್ತಿಗೆ ಪುನಃ ಪಡಿತರ ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸದ್ಯ ಹಂಚಿಕೆ ಮಾಡುತ್ತಿರುವ ವ್ಯಕ್ತಿಯನ್ನು ಕೈಬಿಡಲಾಗಿದೆ. ಪ್ರಾಮಾಣಿಕರನ್ನು ಕೈ ಬಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿರುವವರಿಗೆ ಮಣೆ ಹಾಕುತ್ತಿರುವ ಅಧಿಕಾರಿಗಳ ನಡೆ ಖಂಡನೀಯ ಎಂದು ಗ್ರಾಮಸ್ಥರು ದೂರಿದರು.

ಗ್ರಾಮದಲ್ಲಿ 5 ವರ್ಷಗಳಿಂದ ಕೃಷ್ಣಪ್ಪಗೌಡ ಪಾಟೀಲ ಎಂಬುವರು ಪಡಿತರ ಹಂಚಿಕೆ ಮಾಡುತ್ತಾ ಬಂದಿದ್ದಾರೆ. ಸಮರ್ಪಕವಾಗಿ ಪಡಿತರ ಹಂಚುತ್ತಾ ಬಂದಿದ್ದರೂ ವಿನಃ ಕಾರಣ ಬದಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮಾತ್ರವಲ್ಲದೇ, ಕಳೆದ 10 ವರ್ಷಗಳ ಹಿಂದೆ ಪಡಿತರ ಕಳ್ಳ ಸಾಗಾಣಿಕೆ ಮಾಡುವಾಗ ಪೊಲೀಸರ ಕೈಗೆ ಸಾಕ್ಷೃ ಸಮೇತ ಸಿಕ್ಕಿ ಬಿದ್ದಿದ್ದ ಸಾಹೇಬಗೌಡ ಗು.ಬಿರಾದಾರ ಎಂಬುವರಿಗೆ ಪಡಿತರ ಹಂಚಿಕೆ ಜವಾಬ್ದಾರಿ ವಹಿಸಲಾಗಿದೆ. ಇದನ್ನು ವಿರೋಧಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲೆಂದು ಹೋದಾಗ ತಹಸೀಲ್ದಾರ್ ಸಹ ಪ್ರತಿಭಟನಾಕಾರರ ಮೇಲೆ ದರ್ಪ ಹಾಗೂ ದಬ್ಬಾಳಿಕೆ ಮೆರೆಯುತ್ತಾರೆ. ಇದೆಲ್ಲ ಗಮನಿಸಲಾಗಿ ಸಿಂದಗಿ ತಹಸೀಲ್ದಾರ್ ಪಡಿತರ ಹಂಚಿಕೆ ಜವಾಬ್ದಾರಿ ನೀಡಲು ಲಂಚ ಪಡೆದರಾ? ಎಂಬ ಅನುಮಾನ ಶುರುವಾಗಿದೆ. ಹೀಗಾಗಿ ಕೂಡಲೇ ಜಿಲ್ಲಾಡಳಿತ ಪರಿಶೀಲಿಸಬೇಕೆಂದು ಆಗ್ರಹಿಸಿದರು.

ಸಿಂದಗಿ ತಹಸೀಲ್ದಾರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳ ದರ್ಪ ಹಾಗೂ ದಬ್ಬಾಳಿಕೆ ಗಮನಿಸಿದರೆ ಪಡಿತರ ಹಂಚಿಕೆ ಜವಾಬ್ದಾರಿ ವಹಿಸುವಲ್ಲಿ ಕುತಂತ್ರ ಅಡಗಿದೆ ಎಂಬ ಗುಮಾನಿ ಇದೆ. ಈ ಘಟನೆಯನ್ನು ವಿರೋಧಿಸಿ ಪ್ರಸಕ್ತ ತಿಂಗಳು ಯಾರೊಬ್ಬರೂ ಪಡಿತರ ಪಡೆದಿಲ್ಲ. ಹೀಗಾಗಿ ಜಿಲ್ಲಾಡಳಿತ ಖುದ್ದಾಗಿ ಪ್ರಕರಣವನ್ನು ಪರಿಶೀಲಿಸಬೇಕು. ಪಾರದರ್ಶಕ ಹಾಗೂ ಪ್ರಾಮಾಣಿಕತೆಯಿಂದ ಪಡಿತರ ಹಂಚಿಕೆ ಮಾಡುವವರಿಗೆ ಜವಾಬ್ದಾರಿ ನೀಡಬೇಕು. ಜೊತೆಗೆ ಪ್ರತಿಭಟನಾಕಾರರ ಮೇಲೆ ದರ್ಪ ಹಾಗೂ ದಬ್ಬಾಳಿಕೆ ಮೆರೆದ ಸಿಂದಗಿ ತಹಸೀಲ್ದಾರ್ ಮತ್ತು ಆಹಾರ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಫಲಾನುಭವಿಗಳಾದ ಲಕ್ಷ್ಮಿಬಾಯಿ ಸಿ.ಮಾದರ, ರಾಜಶ್ರೀ ಜಮಾದಾರ, ಶಾಂತಾಬಾಯಿ ಹಿರೇಕುರುಬರ, ಚಂದವ್ವ ಡಾಂಗಿ, ಮಲ್ಲಮ್ಮ ಕೋರವಾರ, ಲಕ್ಷ್ಮಿಬಾಯಿ ಡಾಂಗಿ, ಸೋಮನಾಥ ಬಿರಾದೃ, ಸುಂದ್ರಾಬಾಯಿ ಡಾಂಗಿ, ಮಹಾದೇವಿ ಶಿ.ಖಾನಾಪುರ, ನಾಗಮ್ಮ ಜಟ್ಟಿ, ಶಿವಮ್ಮ ಪಾಟೀಲ, ವಿಜಯಲಕ್ಷ್ಮಿ ಶಂಕರಗೌಡ ಪಾಟೀಲ, ಪರಶುರಾಮ ನಾಯ್ಕೋಡಿ, ಈರಪ್ಪ ಉಪ್ಪಾರ, ಹಣಮಂತ ಡಾಂಗಿ, ನೀಲಮ್ಮ ಉಪ್ಪಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net