

ಅರಸೀಕೆರೆ: ಕಪ್ಪುತಲೆ ಹುಳು ಬಾಧೆಯಿಂದ ಹೈರಾಣಾಗಿರುವ ತೆಂಗು ಬೆಳೆಗಾರರ ಸಂಕಷ್ಟಕ್ಕೆ ಕಡೆಗೂ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ರೋಗ ಬಾಧಿತ ಮರಗಳ ವೈಜ್ಞಾನಿಕ ಅಧ್ಯಯನಕ್ಕೆ ತಂಡ ಕಳುಹಿಸಿ ಕೊಟ್ಟಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇದಕ್ಕೆ ಪೂರಕ ಎನ್ನುವಂತೆ ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‌ಐ) ವಿಜ್ಞಾನಿಗಳು ವಿವಿಧ ಹೋಬಳಿ ಕೇಂದ್ರಗಳ ವ್ಯಾಪ್ತಿಯಲ್ಲಿ ಜು.17 ಮತ್ತು 18ರಂದು ತೆಂಗಿನ ತೋಟಗಳಿಗೆ ಖುದ್ದು ಭೇಟಿ ನೀಡಿ ಬೆಳೆಗಾರರ ಜತೆ ಚರ್ಚೆ ನಡೆಸುವ ಜತೆಗೆ ತೆಂಗಿನ ಗರಿ, ಕಾಂಡದ ಭಾಗ, ಬೇರು, ಎಳನೀರಿನ ಹರಳು ಸೇರಿದಂತೆ ವಿವಿಧ ಮಾದರಿ(ಸ್ಯಾಂಪಲ್ಸ್) ಕೊಂಡೊಯ್ದು ಸಮಗ್ರ ವರದಿ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಶೀಘ್ರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ.
ತಾಲೂಕಿನ ಕಣಕಟ್ಟೆ, ಗಂಡಸಿ, ಬಾಣಾವರ, ಜಾವಗಲ್ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 56.473 ಹೆಕ್ಟೇರ್ ತೆಂಗು ಬೆಳೆಯಿದೆ ಎನ್ನುವ ಅಂಕಿ ಅಂಶಗಳನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಕಪ್ಪುತಲೆ ಹುಳುವಿನ ಬಾಧೆಯಿಂದ ಶೇ.90 ರಷ್ಟು ಇಳುವರಿಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡು ಬಂದಿದ್ದು ಬೆಳಗಾರನನ್ನು ಭಾರಿ ಸಂಕಷ್ಟಕ್ಕೆ ಸಿಲುಕಿಸಿದೆ. ಇದಲ್ಲದೆ ಬಿಳಿನೊಣ, ಕಾಂಡ ಸೋರುವಿಕೆ, ಅಣಬೆ ರೋಗ, ರೈನಾರಸ್ ದುಂಬಿಯ ಉಪಟಳವೂ ಮೇರೆ ಮೀರಿದ್ದು ತೆಂಗಿನ ಮರಗಳಿಂದ ಫಸಲು ಪಡೆಯಲು ಸಾಧ್ಯವಿಲ್ಲದಂತಾಗಿದೆ. ಹವಾಮಾನ ವೈಪರೀತ್ಯ, ಮಣ್ಣಿನಲ್ಲಿ ಪೋಷಕಾಂಶ ಕೊರತೆಯಿಂದ ತೇವಾಂಶ ಕೊರತೆಯೂ ಎದುರಾಗಿದೆ.
ರೈಲ್ವೆ ಕಾಮಗಾರಿಗಳ ಪರಿಶೀಲನೆ ನಿಮಿತ್ತ ಅರಸೀಕೆರೆ ತಾಲೂಕಿಗೆ ಭೇಟಿ ನೀಡಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ನಗರದ ಎಪಿಎಂಸಿ ಆವರಣದಲ್ಲಿ ತೆಂಗು ಬೆಳೆಗಾರರು, ವರ್ತಕರ ಸಭೆ ನಡೆಸಿ ಅಹವಾಲು ಆಲಿಸಿದ್ದರು. ಅಲ್ಲದೆ ಸಮಸ್ಯೆಯ ಗಂಭೀರತೆಯನ್ನು ಕೇಂದ್ರ ತೋಟಗಾರಿಕಾ ಸಚಿವರ ಗಮನಕ್ಕೆ ತಂದು ಪರಿಹರಿಸುವ ವಾಗ್ದಾನವನ್ನೂ ಇತ್ತೀಚೆಗೆ ನೀಡಿದ್ದರು. ಈ ನಡುವೆ ಇತ್ತೀಚೆಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರನ್ನು ಖುದ್ದು ಭೇಟಿ ಮಾಡಿ ತೆಂಗು ಬೆಳೆ ವಿನಾಶದ ಕುರಿತು ಅಂಕಿ, ಅಂಶಗಳ ಸಹಿತ ವಿಸ್ತೃತ ವರದಿ ನೀಡಿದ್ದರು. ಬಳಿಕ ಕೇಂದ್ರ ಸಚಿವರು ಕಾಸರಗೋಡಿನ ವಿಜ್ಞಾನಿಗಳ ತಂಡವನ್ನು ಹಾಸನ, ತುಮಕೂರು ಸೇರಿದಂತೆ ಕೆಲ ಜಿಲ್ಲೆಗೆ ಕಳುಹಿಸಿ ಕೊಡುವ ಮೂಲಕ ಅನ್ನದಾತರ ನೆರವಿಗೆ ಧಾವಿಸಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದು, ಸಚಿವ ವಿ.ಸೋಮಣ್ಣ ಪ್ರಯತ್ನಕ್ಕೆ ಫಲ ದೊರೆತಂತಾಗಿದೆ.
ತಾಲೂಕಿನ ಕೆ.ವೆಂಕಟಾಪುರ, ಭೈರನಾಯಕನಹಳ್ಳಿ, ನಾಗತಿಹಳ್ಳಿ, ಜಾಜೂರು, ಹಿರಿಯೂರು, ಚಿಕ್ಕೂರು, ಕರಡಿಹಳ್ಳಿ ಕುರುವಂಕ, ಗರುಡನಗಿರಿ, ಕಲ್ಲುಸಾದರಹಳ್ಳಿ ಗ್ರಾಮಗಳ ಸರಹದ್ದಿನಲ್ಲಿ ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‌ಐ) ವಿಜ್ಞಾನಿಗಳಾದ ಡಾ.ಪ್ರತಿಭಾ ಹಾಗೂ ಡಾ.ಸುರೇಖಾ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಎರಡು ದಿನ ಪ್ರವಾಸ ನಡೆಸಿ ಕಪ್ಪುತಲೆ ಹುಳು, ಬಿಳಿನೊಣ, ಕಾಂಡ ಸೋರುವಿಕೆ, ಅಣಬೆ ರೋಗ, ರೈನಾರಸ್ ದುಂಬಿಯ ಉಪಟಳದ ಕುರಿತು ಅಧ್ಯಯನ ನಡೆಸಿದೆ. ತೆಂಗಿನ ಗರಿ, ಮರದ ತೊಗಟೆ, ರೂಪಾಂತರಿ ಹುಳಿವಿನ ಬೆಳವಣಿಗೆ ಒಳಗೊಂಡಂತೆ ಇತರ ಮಾದರಿ ಸಂಗ್ರಹಿಸಿ ತೆರಳಿದೆ.
2013ರಲ್ಲಿ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ತೆಂಗು ವಿನಾಶದ ವಾಸ್ತವತೆ ಅರಿಯಲು ಗೋರಖ್‌ಸಿಂಗ್ ನೇತೃತ್ವದ ನಿಯೋಗವನ್ನು ರಾಜ್ಯಕ್ಕೆ ಕಳಹಿಸಿಕೊಟ್ಟಿತ್ತು. ತಂಡದೊಂದಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಕೂಡ ಪ್ರವಾಸ ನಡೆಸಿದ್ದರು. ತಾಲೂಕಿನ ಬೆಳಗುಂಬ, ಮೈಲನಹಳ್ಳಿ ಕೊಪ್ಪಲು, ಶಿಬಿರ, ಗೀಜಿಹಳ್ಳಿ, ಮುರುಂಡಿ, ಬೋರನಕೊಪ್ಪಲು ಸೇರಿದಂತೆ ಹಲವೆಡೆ ಮಾಹಿತಿ ಸಂಗ್ರಹಿಸಿ ವರದಿ ನೀಡಿತ್ತು. ಆ ಬಳಿಕ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ತೆಂಗಿನ ಮರ ಕಳೆದುಕೊಂಡ ಅನ್ನದಾತರಿಗೆ ಪರಿಹಾರ ನೀಡಿದ್ದರು. ಕಪ್ಪುತಲೆ ಹುಳುವಿನ ಭಾಧೆಯಿಂದ ಸಂಕಷ್ಟಕ್ಕೆ ಸಿಲುಕಿರುವ ತೆಗು ಬೆಳೆಗಾರರಿಗೆ ಸಿಎಂ ಸಿದ್ದರಾಮಯ್ಯ ದೊಡ್ಡಮೊತ್ತದ ಪ್ಯಾಕೆಜ್ ನೀಡಬೇಕೆನ್ನುವ ಕೂಗೆದ್ದಿದೆ.
ತೆಂಗು ಬೆಳೆಯನ್ನು ಆಶ್ರಯಿಸಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವರ್ತಕರು, ದಲ್ಲಾಲಿಗಳು, ರಪ್ತುದಾರರು, ತೂಕದ ಸಿಬ್ಬಂದಿ, ಹಮಾಲರು ಬದುಕು ಕಟ್ಟಿಕೊಂಡಿದ್ದಾರೆ. ಕಳೆದ ಒಂದೂವರೆ ದಶಕದಿಂದ ತೆಂಗು ಉತ್ಪನ್ನದಲ್ಲಿ ಕುಸಿತವಾಗುತ್ತಿರುವುದರಿಂದ ಆತಂಕದಲ್ಲಿ ಬದುಕು ಸಾಗಿಸುವಂತಾಗಿದೆ. ಬೆಲೆ ಏರಿಳಿತ, ರೋಗ ಬಾಧೆಯಿಂದ ತೆಂಗು ಬೆಳೆಗಾರ ಕಲ್ಪವೃಕ್ಷವನ್ನು ಕಿತ್ತೆಸೆಯುವ ಮನಸ್ಸು ಮಾಡಿದಂತಿದೆ. ಈಗಾಗಲೇ ಬಾಣಾವರ, ಕಣಕಟ್ಟೆ, ಸುತ್ತಮುತ್ತಲ ಗ್ರಾಮಸ್ಥರು ತೆಂಗು ಬೆಳೆಗೆ ವಿದಾಯ ಹೇಳಿ ದಾಳಿಂಬೆ ಬೆಳೆಯತ್ತ ಚಿತ್ತ ಹರಿಸಿದ್ದಾರೆ. ಕಪ್ಪುತಲೆ ಹುಳು, ಬಿಳಿನೊಣ, ಕಾಂಡ ಸೋರುವಿಕೆ, ಅಣಬೆ ರೋಗ, ರೈನಾರಸ್ ದುಂಬಿಯ ಉಪಟಳದಿಂದ ನೂರಾರು ತೆಂಗಿನ ಮರಗಳು ಧರೆಗುರುಳುತ್ತಿದ್ದು, ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿಗೆ ಚಾತಕ ಪಕ್ಷಿಯಂತೆ ಕಾಯತೊಡಗಿದ್ದಾರೆ.
ತೆಂಗು ಬೆಳೆಗಾರರ ಹಿತ ಕಾಯುವುದು ನನ್ನ ಮೊದಲ ಆದ್ಯತೆ. ಕಲ್ಪವೃಕ್ಷಕ್ಕೆ ತಗುಲಿರುವ ರೋಗ ನಿಯಂತ್ರಣ ಕುರಿತು ಶೀಘ್ರ ವಿಜ್ಞಾನಿಗಳ ಸಭೆ ನಡೆಸಿ ಪರಿಹಾರಕ್ಕೆ ಪ್ರಯತ್ನ ನಡೆಸಲಿದ್ದೇನೆ. ಸಮಸ್ಯೆಯ ಗಂಭೀರತೆಯನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರ ಗಮನಕ್ಕೂ ತರಲಿದ್ದು ತೆಂಗು ಬೆಳೆಗಾರರನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ.
ವಿ.ಸೋಮಣ್ಣ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ (ಸುಕ್ಷೇತ್ರ ಕೋಡಿಮಠದಲ್ಲಿ ನೀಡಿದ ಹೇಳಿಕೆ)
ತೆಂಗು ಬೆಳೆಯುವ ಜಿಲ್ಲೆಗಳ ಅನ್ನದಾತರ ಸಂಕಷ್ಟವನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿರುವುದು ರೈತಪರ ಕಾಳಜಿಯನ್ನು ಅನಾವರಣಗೊ ಳಿಸಿದೆ. ಆದ್ದರಿಂದಲೇ ಕಾಸರಗೋಡಿನ ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‌ಐ) ವಿಜ್ಞಾನಿಗಳ ತಂಡ ತಾಲೂಕಿನ ವಿವಿಧೆಡೆ ಪ್ರವಾಸ ನಡೆಸಿ ರೋಗದ ಸಕಾರಣ ತಿಳಿಯುವ ಪ್ರಯತ್ನ ನಡೆಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೋಗಬಾಧೆಯಿಂದ ನಷ್ಟ ಅನುಭವಿಸುತ್ತಿರುವ ಬೆಳೆಗಾರರಿಗೆ ಪ್ಯಾಕೇಜ್ ನೀಡುವ ಮೂಲಕ ನೆರವಿಗೆ ಧಾವಿಸಬೇಕು.
ನಾಗಸಮುದ್ರಸ್ವಾಮಿ ಕೃಷಿಕ, ಅರಸೀಕೆರೆ
ಕಪ್ಪುತಲೆ ಹುಳುವಿನ ನಿಯಂತ್ರಿಸಲು ಗೋನಿಯೋಜಸ್ ನೆಫಾಂಡಿಟಿಸ್ ಪರೋಪ ಜೀವಿಗಳನ್ನು ಉತ್ಪಾದಿಸಿ ತೆಂಗಿನ ಗರಿಗಳಿಗೆ ಬಿಡುಗಡೆ ಮಾಡಲಾಗಿದೆ. ತೆಂಗು ಬೆಳೆಗಾರರ ಸಂಕಷ್ಟ ತಿಳಿಯಲು ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ತಾಲೂಕಿನ ವಿವಿಧೆಡೆ ಎರಡು ದಿನ ಪ್ರವಾಸ ನಡೆಸಿ ಮಾಹಿತಿ ಕಲೆ ಹಾಕಿದೆ.ರೋಗ ಬಾಧಿತ ಮರಗಳಿಗೆ ರೈತರು ಬೇವಿನ ಹಿಂಡಿ ಬಳಕೆ ಮಾಡುವುದರಿಂದ ಇತರ ರೋಗಗಳನ್ನೂ ಹತೋಟಿಗೆ ತರಬಹುದಾಗಿದೆ.
ಸೀಮಾ ಸಹಾಯಕ ನಿರ್ದೇಶಕಿ, ತೋಟಗಾರಿಕಾ ಇಲಾಖೆ, ಅರಸೀಕೆರೆ