ಕೃಷಿ ವಿವಿ ಸ್ಥಾಪನೆಗೆ ಸ್ಪಂದನೆ

JATRE Nugge 1
ಬಾಗೂರು ಗ್ರಾಮದ ಶ್ರೀ ಸಂತೆಕಾಳೇಶ್ವರಿ ಹಾಗೂ ಚಿಕ್ಕಮ್ಮ ದೇವಿಯ ದೇಗುಲಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು. ಶ್ರೀ ಶಂಭುನಾಥ ಸ್ವಾಮೀಜಿ, ಕೃಷಿ ಸಚಿವ ಚೆಲುವರಾಯಸ್ವಾಮಿ, ಗೋಪಾಲಸ್ವಾಮಿ, ಬಾಗುರು ಮಂಜೇಗೌಡ, ಬಿ.ಎಚ್. ಶಿವಣ್ಣ, ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ದಕ್ಷಿಣಾ ಮೂರ್ತಿ ಇದ್ದರು.
Published on

ಬಾಗೂರು: ಹೋಬಳಿ ಕೇಂದ್ರದ ಶಕ್ತಿದೇವತೆ ಶ್ರೀ ಸಂತೆಕಾಳೇಶ್ವರಿ ಹಾಗೂ ಚಿಕ್ಕಮ್ಮದೇವಿ ದೇವಾಲಯಗಳ ಲೋಕಾರ್ಪಣೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ನೆರವೇರಿತು.

ದೇವಾಲಯ ಲೋಕಾರ್ಪಣೆ ಅಂಗವಾಗಿ ಧಾರ್ಮಿಕ ವಿಧಿ ವಿಧಾನದಂತೆ ಸ್ಥಿರಬಿಂಬ, ಪ್ರಾಣ ಪ್ರತಿಷ್ಠಾಪನೆ ದುರ್ಗಾ ಹೋಮ, ಪೂರ್ಣಾಹುತಿಯ ನಂತರ ಕಲಶ ಪ್ರತಿಷ್ಠಾಪನೆ ನೆರವೇರಿತು. ಬಳಿಕ ದೇವಾಲಯದ ಮುಂಭಾಗ ಆಯೋಜಿಸಿದ್ದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು ಆಶೀರ್ವಚನ ನೀಡಿದರು.

ಸುಮಾರು 16 ಗ್ರಾಮಗಳ ಗ್ರಾಮಸ್ಥರ ಉದಾರ ನೆರವಿನೊಂದಿಗೆ ಶ್ರೀ ಸಂತೇ ಕಾಳೇಶ್ವರಿ ದೇವಾಲಯ ಸುಂದರವಾಗಿ ನಿರ್ಮಾಣಗೊಂಡು ಲೋಕಾರ್ಪಣೆಯಾಗಿದೆ. ಶ್ರೀ ಆದಿಚುಂಚನಗಿರಿ ಮಠದ ವತಿಯಿಂದ ಅನೇಕ ಕಡೆಗಳಲ್ಲಿ ಮೆಡಿಕಲ್ ಇಂಜಿನಿಯರಿಂಗ್ ಸೇರಿದಂತೆ ಅನೇಕ ವೃತ್ತಿಪರ ಕಾಲೇಜುಗಳನ್ನು ನಡೆಸಲಾಗುತ್ತಿದೆ. ಆದರೆ ಕೃಷಿ ಕಾಲೇಜನ್ನು ಮಾತ್ರ ಶ್ರೀ ಮಠದ ವತಿಯಿಂದ ತೆರೆಯಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಅವಕಾಶ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಕೃಷಿ ಸಚಿವರು ತಮ್ಮ ಮನವಿಗೆ ಸ್ಪಂದಿಸಿ ಕೃಷಿ ಕಾಲೇಜು ಮಂಜೂರು ಮಾಡಿಸಿದ್ದಾರೆ. ಇದರ ಜತೆಗೆ ಹೆಚ್ಚುವರಿಯಾಗಿ ಕನಕಪುರ ಹಾಗೂ ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಮಂಜೂರು ಮಾಡಿರುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ ಎಂದರು.

ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಗ್ರಾಮಸ್ಥರು ಹಾಗೂ ಭಕ್ತರ ನೆರವಿನಿಂದ ಶ್ರೀ ಸಂತೆಕಾಳೇಶ್ವರ ದೇವಾಲಯ ನಿರ್ಮಾಣಗೊಂಡಿದೆ. ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರ ಪರಿಶ್ರಮದಿಂದ ದೇವಾಲಯ ಸುಂದರವಾಗಿ ನಿರ್ಮಾಣಗೊಂಡಿದೆ. ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣದ ಜತೆಗೆ ವಸತಿಯು ಸಿಗುವಂತಾಗಿದೆ. ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ಕೃಷಿ ಇಲಾಖೆಯ ಮೂಲಕ ಅನೇಕ ರೈತ ಸ್ನೇಹಿತ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ತಾಲೂಕಿನ ಹಿರಿಸಾವೆ, ಕಲ್ಲೇ ಸೋಮನಹಳ್ಳಿ, ಸಂತೇಶಿವರ ಏತ ನೀರಾವರಿ ಯೋಜನೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಿಗೆ ರಾಜ್ಯದ ಕಾಂಗ್ರೆಸ್ ಹೆಚ್ಚಿನ ಸಹಕಾರ ನೀಡುತ್ತಿದೆ. ಶ್ರೀ ಸಂತೆಕಾಳೇಶ್ವರಿ ದೇವಾಲಯ ನಿರ್ಮಾಣಕ್ಕೂ ಸರ್ಕಾರ ನೀರಾವರಿ ಯೋಜನೆಯ ಮೂಲಕ ಸುಮಾರು 65 ಲಕ್ಷ ರೂ. ಅನುದಾನ ನೀಡಿದೆ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಿದರೆ ಯಾವ ಕೆಲಸವೂ ಬೇಕಾದರೂ ಪೂರ್ಣಗೊಳ್ಳುತ್ತದೆ ಎಂಬುದಕ್ಕೆ ಶ್ರೀ ಸಂತೆಕಾಳೇಶ್ವರಿ ದೇವಾಲಯವೇ ಉದಾಹರಣೆ ಎಂದರು.

ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಗೂರು ಮಂಜೇಗೌಡ ಹಾಗೂ ಉಪಾಧ್ಯಕ್ಷ ಬಿ.ಎಚ್. ಶಿವಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಹಾಸನ ಕೊಡಗು ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ, ಸಚಿವ ಚೆಲುವರಾಯ ಸ್ವಾಮಿ ಅವರ ಪತ್ನಿ ಧನಲಕ್ಷ್ಮೀ ಹಾಸನ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ದೇವಾಲಯ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ದಕ್ಷಿಣ ಮೂರ್ತಿ, ಕಾಂಗ್ರೆಸ್ ಯುವ ಮುಖಂಡ ಯುವರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net