

ಮೈಸೂರು: ರಾಜ್ಯಾದ್ಯಂತ ಆರಂಭವಾಗಿರುವ ಒಳಮೀಸಲು ಸಮಗ್ರ ದತ್ತಾಂಶ ಸಂಗ್ರಹ ಜಾತಿ ಜನಗಣತಿಗೆ ಜಿಲ್ಲೆಯಲ್ಲಿ ಗಣತಿದಾರರಿಗೆ ಜನ ಉತ್ಸಾಹದಿಂದ ಮಾಹಿತಿ ಒದಗಿಸಿದರು.
ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ಶಿಫಾರಸಿನಂತೆ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಹಂಚಿಕೆ ಮಾಡುವ ಕುರಿತು ಸೋಮವಾರದಿಂದ ಸಮೀಕ್ಷೆ ಕಾರ್ಯ ಶುರುವಾಗಿದೆ. ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೂ ಮುನ್ನ ನೈಜ ದತ್ತಾಂಶ ಸಂಗ್ರಹಕ್ಕಾಗಿ ಮೊದಲನೇ ಹಂತದ ಭಾಗವಾಗಿ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ನಂತರ ಎರಡನೇ ಹಂತ ವಿಶೇಷ ಶಿಬಿರದ ಮೂಲಕ ನಡೆಯಲಿದೆ. ಇನ್ನು 3ನೇ ಹಂತ ಆನ್‌ಲೈನ್ ಮೂಲಕ ನಡೆಯಲಿದ್ದು, ಅಲ್ಲೂ ಜನರಿಗೆ ಮಾಹಿತಿಯನ್ನು ನೀಡಲು ಅವಕಾಶ ಇದೆ.
ನಗರ ಮತ್ತು ಜಿಲ್ಲೆಯ 9 ತಾಲೂಕುಗಳಲ್ಲಿ ಶಿಕ್ಷಕರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರ ಪ್ರದೇಶ ವ್ಯಾಪ್ತಿಯ ಅಶೋಕಪುರಂ, ಗಾಂಧಿನಗರ, ಎನ್.ಆರ್.ಮೊಹಲ್ಲಾ, ವಿಶ್ವೇಶ್ವರನಗರ, ದೇವರಾಜ ಅರಸು ಕಾಲನಿ, ಮೇಟಗಳ್ಳಿ ಸೇರಿದಂತೆ ದಲಿತ ಸಮುದಾಯದವರು ಹೆಚ್ಚು ವಾಸಿಸುವ ಬಡಾವಣೆಗಳಲ್ಲಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು.
ಗಣತಿ ವೇಳೆ ಮೂಲ ಸಮುದಾಯ ಯಾವುದು, ಎಷ್ಟು ಜನ ವಾಸಿಸುತ್ತಿದ್ದಾರೆ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಕುಟುಂಬದ ಮುಖ್ಯಸ್ಥರ ಉದ್ಯೋಗ, ಕುಟುಂಬದ ಕುಲ ಕಸುಬು ಏನು, ಜಮೀನು ಹೊಂದಿದ್ದಾರೆಯೇ ಎಂಬಿತ್ಯಾದಿ ಸಮೀಕ್ಷೆಗೆ ಪೂರಕವಾದ ದಾಖಲೆಗಳನ್ನು ಗಣತಿದಾರರು ಪಡೆದುಕೊಂಡು ಆ್ಯಪ್‌ನಲ್ಲಿ ನಮೂದಿಸಿದರು.
ಸಮೀಕ್ಷೆಗಾಗಿ ಗಣತಿದಾರರು ಬರಲಿದ್ದಾರೆ ಎಂಬುದನ್ನು ಅರಿತಿದ್ದ ಬಡಾವಣೆಯ ಮುಖಂಡರು, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು, ಊರಿನ ಮುಖಂಡರು ಸಮುದಾಯದವರಿಗೆ ನಿಖರ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ತಮ್ಮ ತಮ್ಮ ಮೂಲ ಜಾತಿಯನ್ನು ನಮೂದಿಸುವಂತೆ ಜಾಗೃತಿ ಮೂಡಿಸಿದರು.
ಆ್ಯಪ್ ಡೌನ್‌ಲೋಡ್, ಪೂರಕ ಸಾಮಗ್ರಿ ಕೊರತೆ
ಮೊದಲಿಗೆ ಗಣತಿದಾರರು ತಮ್ಮ ಗುರುತಿನ ಚೀಟಿ, ನಮೂನೆ-4 ಹಾಗೂ ವಾರ್ಡ್‌ಗೆ ನೇಮಿಸಿರುವ ಪತ್ರವನ್ನು ಕಲೆ ಹಾಕಿದರು. ಬಳಿಕ ಕೆಲವರಿಗೆ ಆ್ಯಪ್ ಡೌನ್‌ಲೋಡ್ ಆಗಲು ತೊಡಕಾಯಿತು. ತರಬೇತಿ ಸಮಯದಲ್ಲಿ ಟ್ರಯಲ್ ಆ್ಯಪ್ ಡೌನ್‌ಲೋಡ್ ಮಾಡಿದ್ದ ಕಾರಣ ಆಪ್‌ಡೇಟ್ ಆದ ಹೊಸ ಆ್ಯಪ್ ಡೌನ್‌ಲೋಡ್ ಆಗುತ್ತಿರಲಿಲ್ಲ. ಇದರಿಂದ ಕೆಲಕಾಲ ಗೊಂದಲ ಉಂಟಾಯಿತು.
ನಂತರ ಮೇಲ್ವಿಚಾರಕರು ಬಂದೊಂದೇ ಹೆಸರು ಇರುವ ಎರಡು ಆ್ಯಪ್ ಡೌನ್‌ಲೋಡ್ ಆಗುವುದಿಲ್ಲ. ಟ್ರಯಲ್ ಆ್ಯಪ್ ಅನ್ನು ಡಿಲೀಟ್ ಮಾಡಿ ಹೊಸ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು. ಹೀಗಾಗಿ ಮಧ್ಯಾಹ್ನದ ಹೊತ್ತಿಗೆ ಆ್ಯಪ್ ಡೌನ್‌ಲೋಡ್ ಸಮಸ್ಯೆ ಪರಿಹಾರವಾಯಿತು. ಕೆಲವು ಕಡೆ ಸಮೀಕ್ಷೆಗೆ ಬೇಕಾದ ಪರಿಕರಿಗಳನ್ನು ಸಕಾಲಕ್ಕೆ ನೀಡಲಿಲ್ಲ ಎಂಬ ದೂರುಗಳು ಕೇಳಿ ಬಂದವು.
ಸಮೀಕ್ಷೆಗೆ 2950 ಜನರು
ಮೈಸೂರು ಜಿಲ್ಲೆಯಲ್ಲಿ ಒಟ್ಟು 2950 ಗಣತಿದಾರರನ್ನು ನೇಮಕ ಮಾಡಲಾಗಿದ್ದು, ಶೇ.10ರಷ್ಟು ಗಣತಿದಾರರನ್ನು ಕಾಯ್ದಿರಿಸಲಾಗಿದೆ. ಪ್ರತಿ 10 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.
ಸಮೀಕ್ಷೆಯು ಒಟ್ಟು ಮೂರು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಮೇ 17ರವರೆಗೆ ಗಣತಿದಾರರು ಮನೆ, ಮನೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ.
ಎರಡನೇ ಹಂತದಲ್ಲಿ ಮೇ 19ರಿಂದ 21 ರವರೆಗೆ ಸಮೀಕ್ಷೆ ಬ್ಲಾಕ್‌ಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು ಮನೆಗಳಿಗೆ ಭೇಟಿ ನೀಡಿದ ಸಂದಭರ್ ಬಿಟ್ಟು ಹೋದ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸುವುದು. ಮೂರನೇ ಹಂತದಲ್ಲಿ ಮೇ 22 ಮತ್ತು 23 ರಂದು ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.