ಗುಂಡ್ಲುಪೇಟೆ ಪಟ್ಟಣ, ಹೋಬಳಿ ಕೇಂದ್ರಗಳಲ್ಲೂ ಸ್ಪಂದನೆ

29-GPT-2-4
Published on

ಗುಂಡ್ಲುಪೇಟೆ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ನೀಡಿದ್ದ ಕರೆಗೆ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿತು.


ಬಿಜೆಪಿ, ರೈತ ಹಾಗೂ ಕನ್ನಡ ಸಂಘಟನೆಗಳ ಮುಖಂಡರು ಬಂದ್ ಯಶಸ್ಸಿಗೆ ಶ್ರಮಿಸಿದ್ದರಿಂದ ಪಟ್ಟಣ, ತಾಲೂಕಿನ ಹೋಬಳಿ ಕೇಂದ್ರಗಳಾದ ತೆರಕಣಾಂಬಿ, ಬೇಗೂರು ಹಾಗೂ ಹಂಗಳ ಗ್ರಾಮದಲ್ಲಿ ಬೆಳಗ್ಗೆ 6 ರಿಂದ ಸಂಜೆ 5ರವರೆಗೆ ವ್ಯಾಪಾರಸ್ಥರು ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು. ಸಾರಿಗೆ ಬಸ್‌ಗಳು, ಆಟೋ ಟೆಂಪೋ ಮುಂತಾದ ವಾಹನಗಳೂ ರಸ್ತೆಗಿಳಿಯಲಿಲ್ಲ. ತರಕಾರಿ ಮಾರುಕಟ್ಟೆಗೆ ರಜೆ ಘೋಷಿಸಿದ್ದರಿಂದ ಪಟ್ಟಣ ಬಿಕೋ ಎನ್ನುತ್ತಿತ್ತು.


ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು, ರೈತ ಹಾಗೂ ಕನ್ನಡ ಸಂಘಟನೆಗಳು ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ನಡೆಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಕಾವಲು ಪಡೆಯ ಸದಸ್ಯರು ಬ್ಯಾಂಕು, ಸರ್ಕಾರಿ ಕಚೇರಿ, ಜೀವವಿಮಾ ನಿಗಮದ ಕಚೇರಿ ಹಾಗೂ ಫೈನಾನ್ಸ್ ಕಚೇರಿಗಳ ಬಾಗಿಲು ಮುಚ್ಚಿಸಿ ಬಂದ್ ಯಶಸ್ವಿಗೆ ಶ್ರಮಿಸಿದರು.


ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರು ರಸ್ತೆತಡೆ ನಡೆಸಿದ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಬಿಜೆಪಿ ಆಡಳಿತದಲ್ಲಿದ್ದಾಗ ರಾಜ್ಯದ ನೀರಿನ ಹಕ್ಕಿಗಾಗಿ ಮೇಕೆದಾಟು ಯೋಜನೆಗೆ ಒತ್ತಾಯಿಸಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ತಾನೇ ಅಧಿಕಾರದಲ್ಲಿದ್ದರೂ ಕಾವೇರಿ ನೀರು ಹರಿಸುವ ಮೂಲಕ ಜನತೆಗೆ ದ್ರೋಹ ಬಗೆದಿದೆ. ರಾಜ್ಯದ ಎಲ್ಲ ಜಲಾಶಯಗಳಲ್ಲಿಯೂ ನೀರಿಲ್ಲದೆ ಖಾಲಿಯಾಗಿದ್ದರೂ ರಾಜ್ಯ ಸರ್ಕಾರ ತಮಿಳುನಾಡು ಕೇಳುವ ಮೊದಲೇ ನೀರು ಹರಿಸಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ಬದಲು ಪ್ರತಿಯೊಂದಕ್ಕೂ ಷರತ್ತು ಹಾಕಿ ಜನತೆಯನ್ನು ವಂಚಿಸುತ್ತಿದೆ. ಜನತೆಯ ಹಿತಾಸಕ್ತಿಗಿಂದ ಅಧಿಕಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಪುರಸಭೆ ಮಾಜಿ ಅಧ್ಯಕ್ಷ ಪಿಗಿರೀಶ್, ಮಾಜಿ ಅಧ್ಯಕ್ಷ ಎಲ್.ಸುರೇಶ್, ಎಸ್.ನಾಗೇಂದ್ರ, ಕನ್ನಡ ಸಂಘಟನೆಯ ಮುನೀರ್, ಈಶ್ವರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ಪ್ರಣಯ್, ರಾಜ್ಯ ತಮಿಳು ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣನ್ ಇತರರು ಇದ್ದರು.


ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ರೈತ ಮುಖಂಡ ಟಿ.ಎಸ್.ಶಾಂತಮಲ್ಲಪ್ಪ ಹಾಗೂ ಬಿಜೆಪಿ ಮುಖಂಡ ಟಿ.ಆರ್.ರಮೇಶ್ ನಾಯ್ಕ ನೇತೃತ್ವದಲ್ಲಿ ಬಂದ್ ಆಚರಿಸಲಾಯಿತು. ಕನ್ನಡ ಸಂಘಟನೆಯ ಸದಸ್ಯರು ತಾಲೂಕಿನ ಬೇಗೂರಿನಲ್ಲಿ ಅಶೋಕ್ ಕುಮಾರ್ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಬಂದ್‌ಗೆ ಬೆಂಬಲ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net