

ಮೈಸೂರು: ಸಾಹಿತಿಗಳು ಸಮಾಜ ಜೀವಿಗಳು. ಸಾಹಿತ್ಯದ ಮೂಲಕ ಸಮಾಜದ ಆಗುಹೋಗುಗಳಿಗೆ ಸ್ಪಂದಿಸಬೇಕಿದೆ ಎಂದು ಕವಯತ್ರಿ ಜ.ನಾ.ತೇಜಶ್ರೀ ಹೇಳಿದರು.
ನಗರದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕವಯತ್ರಿ ಜ.ನಾ.ತೇಜಶ್ರೀ ಅವರೊಂದಿಗೆ ಕಾವ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ ಎನ್ನುವುದು ವಿಚಿತ್ರ-ವೈರುಧ್ಯ. ಎಲ್ಲರಂತೆ ಇದ್ದುಬಿಡೋಣವೆಂದು ಅನಿಸುತ್ತದೆಯಾದರೂ ಬರೆಯದೆ ಸುಮ್ಮನಿರುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಲೋಕದ ಸಂಗತಿಗಳು ಬದುಕನ್ನು ಮತ್ತೆ ಕಾಡುತ್ತದೆ, ಕದಡುತ್ತದೆ ಎಂದರು.
ಉಳಿದವರೆಲ್ಲ ಆರಾಮಾಗಿರುವುದನ್ನು ನೋಡಿದಾಗ, ಕೆಲ ಸನ್ನಿವೇಶಗಳು ನನ್ನನ್ನೇ ಏಕೆ ಇಷ್ಟು ಕಾಡುತ್ತವೆ? ಇನ್ನು ಮುಂದೆ ಬರೆಯುವುದನ್ನು ನಿಲ್ಲಿಸುವ ಯೋಚನೆಯೂ ಬರುತ್ತದೆ. ಆದರೆ, ಸಮಾಜ ಜೀವಿಗಳು ನಾವು. ಸಾಹಿತ್ಯದ ಮೂಲಕ ಅದಕ್ಕೆ ಸ್ಪಂದಿಸಬೇಕಿದೆ ಎಂದರು.
ಈಗ ಎನ್ನುವುದೇ ಕಾವ್ಯಕ್ಷಣ. ಕವಿತೆಯನ್ನು ಬರೆಯುವುದಕ್ಕೆ ಸ್ಪೂರ್ತಿ ನೀಡುವುದೇ, ಆಯಾ ಕ್ಷಣದ ಘಟನೆಗಳು. ಇಷ್ಟವಿಲ್ಲದಿದ್ದರೂ ಕಾಣಬೇಕಿದ್ದ ಸೂರ್ಯೋದಯ, ಮೋಡಗಳ ಮೇಲಿನ ತರತರದ ಚಿತ್ತಾರಗಳು ಆಗ ಒತ್ತಾಯಿಸುತ್ತವೆ ಎಂದರು.
ಅಜ್ಜನ ಮನೆಯ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದಾಗ ಪುಟ್ಟ ಗಿಳಿಗಳೆಲ್ಲವೂ ಹಾರಿಹೋದವು. ಒಣಗಿದ ಮರವೆಂಬುದು ತಿಳಿದಾಗ, ಮರಕ್ಕೆ ಗಿಳಿಗಳಿಂದಲೇ ಹಸಿರು ಬಂದಿತೇ ಅಥವಾ ಈ ಗಿಳಿಗಳು ಹಾರಿಹೋಗುವ ಮುನ್ನ ಮರದ ಎಲೆಗಳನ್ನೆಲ್ಲ ಕಿತ್ತೊಯ್ದವೇ? ಎಂಬ ಪ್ರಶ್ನಿಸಿದರು.
ನೆರುಡಾ, ಟಾಲ್‌ಸ್ಟಾಯ್, ಮಾಯಾ ಏಂಜೆಲೊ ಮುಂತಾದ ಸಾಹಿತಿಗಳು ಬಹಳಷ್ಟು ಪ್ರಭಾವ ಬೀರಿದ್ದಾರೆ ಎಂದರು.
ಅನುವಾದಕಿಯಾಗಿಯೂ ಛಾಪು ಮೂಡಿಸಿರುವ ತೇಜಶ್ರೀ ಅವರು, ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿಯನ್ನು ಓದಿದ್ದು ಮಾತ್ರವಲ್ಲ, ಭಾಷಾಂತರ ವಿಷಯದಲ್ಲಿ ಡಿಪ್ಲೋಮಾ ಪದವಿಯನ್ನೂ ಪಡೆದದ್ದನ್ನು ಮೆಲುಕುಹಾಕಿದರು.
ಚಿಂತಕ ಓ.ಎಲ್.ನಾಗಭೂಷಣಸ್ವಾಮಿ ಮಾತನಾಡಿ, ಕನ್ನಡದ ಪ್ರಮುಖ ಸಾಹಿತಿಗಳ ಪಟ್ಟಿಯಲ್ಲಿ ತೇಜಶ್ರೀ ಅವರೂ ಒಬ್ಬರು. ಇವರ ಬಹುತೇಕ ಕೃತಿಗಳನ್ನು ನಾನು ಓದಿದ್ದು, ತೇಜಶ್ರೀ ಅವರದು ಸೃಜನಶೀಲ ಮನಸ್ಸು. ನನ್ನ ಗೆಳೆಯ ರಾಮು ಮುಖಾಂತರ ಇವರ ಕವಿತೆಗಳನ್ನು ಮತ್ತೆ ಓದತೊಡಗಿದೆ. ಸಾಹಿತ್ಯಕ್ಕೆ ಎಷ್ಟೆಲ್ಲ ಕೆಲಸ ಮಾಡುತ್ತಿದ್ದಾರೆ ಎನಿಸುತ್ತದೆ ಎಂದರು.
ಮೈಸೂರು ಆಕಾಶವಾಣಿಯ ಹಿರಿಯ ಉದ್ಘೋಷಕ ಡಾ.ಮೈಸೂರು ಉಮೇಶ್, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಜಾಹಿದಾ, ರಂಗ ಕಲಾವಿದ ರಾಜೇಶ್ ಮಾಧವನ್, ಅಪರಿಚಿತ ಓದುಗ ಬಳಗದ ಕಿರಣ್ ಪಿ.ಕೌಶಿಕ್, ಸಂಶೋಧನಾ ವಿದ್ಯಾರ್ಥಿ ಸಂಜಯ್ ಕುಮಾರ್ ಇತರರಿದ್ದರು.