ಹಳ್ಳಿ ಜನರ ಸಮಸ್ಯೆಗೆ ಸ್ಪಂದಿಸಿ

P PURA MLA 1 (4)
Published on

ಪರಶುರಾಮಪುರ: ಹಳ್ಳಿ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿ, ಪರಿಹರಿಸುವಲ್ಲಿ ತುರ್ತು ಕ್ರಮಕೈಗೊಳ್ಳಬೇಕು. ಕರ್ತವ್ಯದಲ್ಲಿ ಬದ್ಧತೆ ಮೆರೆಯಬೇಕು ಎಂದು ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಸೂಚಿಸಿದರು.

ಗ್ರಾಮದ ಕೆಪಿಎಸ್ ಶಾಲಾವರಣದಲ್ಲಿ ಬುಧವಾರ ಆಯೋಜಿಸಿದ್ದ ಜನಸಂಪರ್ಕ ಸಭೆ ಮತ್ತು ಪರಶುರಾಮಪುರ ಹೋಬಳಿಯ ಜನರ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಜನರ ಆಶೋತ್ತರಗಳಂತೆ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಅರ್ಹರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ಜನಪರ ಕಾರ್ಯಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ತಿಂಗಳಿಗೊಮ್ಮೆ ಹೋಬಳಿ ಮಟ್ಟದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಸಭೆ ಮತ್ತು ಗ್ರಾಪಂ ಮಟ್ಟದ ವಿವಿಧ ಗ್ರಾಮಗಳಳಲ್ಲಿ ಜನಸಂಪರ್ಕ ಸಭೆ ಆಯೋಜಿಸಿ, ಅರ್ಹರಿಗೆ ಸರ್ಕಾರದ ಸೌಕರ್ಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶಾಲಾ-ಕಾಲೇಜ್ ಆವರಣದಲ್ಲಿ ರಾತ್ರಿ ವೇಳೆ ದುಶ್ಚಟಗಳು ನಡೆಯುತ್ತಿರುವ ಕುರಿತು ಮಾಹಿತಿಯಿದ್ದು, ಇಂತಹ ಕೆಲಸದಲ್ಲಿ ಪಾಲ್ಗೊಳ್ಳುವ ಪುಂಡರಿಗೆ ತಕ್ಕ ಪಾಠ ಕಲಿಸಲು ಪೊಲೀಸ್ ಇಲಾಖೆ ಮುಂದಾಗಬೇಕು. ರಾತ್ರಿ ವೇಳೆ ಗಸ್ತು ತಿರಬೇಕು ಎಂದು ಸೂಚಿಸಿದರು.

ತಹಸೀಲ್ದಾರ್ ರೆಹಾನ್ ಪಾಷಾ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಕಂದಾಯ ಮತ್ತು ಪಂ.ರಾಜ್ ಇಲಾಖೆಯವರು ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಶ್ರಮಿಸಬೇಕು ಎಂದರು.

ಗ್ರಾಮೀಣ ಪ್ರದೇಶಗಳಲ್ಲೂ 6-9 ಗಂಟೆ ನಿರಂತರವಾಗಿ ವಿದ್ಯುತ್ ನೀಡಬೇಕು. ಹೋಬಳಿ ಕೇಂದ್ರದ ಕಾಲೇಜು ಕಟ್ಟಡದಲ್ಲಿ ಆಗಿರುವ ಸೌಕರ್ಯಗಳ ಕೊರತೆ ನೀಗಿಸಲು ಪಂ.ರಾಜ್ ಇಲಾಖೆಯ ಎಇಇ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಗತ್ಯಕ್ಕೆ ತಕ್ಕಂತೆ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net