

ಯಲ್ಲಾಪುರ: ಕಾನೂನಿನ ನೆಪ ಹೇಳದೇ ಬಡವರ ಕಷ್ಟಕ್ಕೆ ಮಾನವೀಯತೆಯಿಂದ ಅಧಿಕಾರಿಗಳು ಸ್ಪಂದಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಗಾಂಧಿ ಕುಟೀರದಲ್ಲಿ ಮಂಗಳವಾರ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾಸಾಶನಗಳಿಗೆ ಸಂಬಂಧಿಸಿದಂತೆ ಬಂದ 14 ಅರ್ಜಿಗಳನ್ನು ಪರಿಶೀಲಿಸಿ, ಮಂಜೂರಾತಿ ಆದೇಶ ನೀಡಲಾಯಿತು. ಉಪನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಮಂಜುನಾಥ ಹೆಗಡೆ ಅರ್ಜಿ ಸಲ್ಲಿಸಿದರು. ಅಗತ್ಯ ಅನುದಾನ ನೀಡಿ ಕ್ಯಾಮರಾ ಅಳವಡಿಕೆಗೆ ಶಾಸಕರು ಪ.ಪಂ. ಅಧಿಕಾರಿಗಳಿಗೆ ಸೂಚಿಸಿದರು.
ಕಳಚೆಗೆ ಬಾಗಿನಕಟ್ಟಾ ಮೂಲಕ ಬದಲಿ ವಿದ್ಯುತ್ ಮಾರ್ಗ ಮಾಡಲಾಗಿದ್ದು, ಎರಡು ವರ್ಷ ಕಳೆದರೂ ಸಂಪರ್ಕ ಕಲ್ಪಿಸಿಲ್ಲ ಎಂದು ಉಮೇಶ ಭಾಗ್ವತ ದೂರಿದರು. ಒಂದು ವಾರದೊಳಗೆ ಸಂಪರ್ಕ ಕಲ್ಪಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಹೆಬ್ಬಾರ ಸೂಚಿಸಿದರು.
ಅರಣ್ಯ ಇಲಾಖೆಗೆ ಸೇರಿದ ಉಪಳೇಶ್ವರದ ಆಟದ ಮೈದಾನ ಸ್ಥಳದ ವಿವಾದ ಕುರಿತಂತೆ ಪ್ರಮೋದ ಜಂಬೆಸಾಲ ಪ್ರಸ್ತಾಪಿಸಿದರು. ಕಂದಾಯ, ಅರಣ್ಯ ಹಾಗೂ ಸರ್ವೇ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ಸಮಸ್ಯೆ ಪರಿಹರಿಸಲು ಶಾಸಕರು ನಿರ್ದೇಶನ ನೀಡಿದರು.
ಮಾಗೋಡ ಜಲಪಾತಕ್ಕೆ ಬರುವ ಪ್ರವಾಸಿಗರಿಂದ ಗ್ರಾಮ ಅರಣ್ಯ ಸಮಿತಿ ಹಾಗೂ ಗ್ರಾಪಂ ವತಿಯಿಂದ ಪ್ರತ್ಯೇಕವಾಗಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಅದರಿಂದ ನಿತ್ಯವೂ ಗಲಾಟೆ ನಡೆಯುತ್ತಿದೆ ಎಂದು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ಟ ಕಿರಕುಂಭತ್ತಿ ಪ್ರಸ್ತಾಪಿಸಿದರು.
ಜಿಲ್ಲಾಧಿಕಾರಿಗೆ ಈ ಕುರಿತು ಮನವಿ ನೀಡಿ, ಅವರಿಂದ ಯಾರಿಗೆ ಅನುಮತಿ ದೊರೆಯುತ್ತದೆಯೋ ಅವರು ಮಾತ್ರ ಶುಲ್ಕ ವಸೂಲಿ ಮಾಡುವಂತೆ ಶಾಸಕರು ಹೇಳಿದರು.
ಟೆಂಡರ್ ಪಡೆದು ಕಾಮಗಾರಿ ಕೈಗೊಳ್ಳದ, ನೋಟಿಸ್‌ಗಳಿಗೂ ಸ್ಪಂದಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಜಿ.ಪಂ., ಲೋಕೋಪಯೋಗಿ ಹಾಗೂ ಜಲಜೀವನ ಮಿಷನ್ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ತಹಸೀಲ್ದಾರ್ ಅಶೋಕ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು. ಇಡಗುಂದಿ ಗ್ರಾಪಂ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಆನಗೋಡ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ, ಚಂದಗುಳಿ ಗ್ರಾಪಂ ಸದಸ್ಯ ಆರ್.ಎಸ್. ಭಟ್ಟ, ಪಪಂ ಸದಸ್ಯೆ ಸುನಂದಾ ದಾಸ್, ತಾಪಂ ಇಒ ಎನ್.ಆರ್. ಹೆಗಡೆ ಇತರರಿದ್ದರು.
ಜನಸ್ಪಂದನಾ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಶಾಸಕ ಹೆಬ್ಬಾರ ಕೊಂಡಾಡಿದರು. ಅನ್ನಭಾಗ್ಯ, ಗೃಹಲಕ್ಷ್ಮೀ, ಶಕ್ತಿ ಯೋಜನೆಗಳು ಅನೇಕ ಬಡ ಮಹಿಳೆಯರ ಬದುಕಿಗೆ ಬಲ ತಂದಿವೆ. ನಮ್ಮ ಭಾಗದ ಮಹಿಳೆಯರಿಗೆ ಈ ಯೋಜನೆಗಳ ಮಹತ್ವ ಅಷ್ಟಾಗಿ ಗಮನಕ್ಕೆ ಬಾರದಿದ್ದರೂ, ತೀರಾ ಬಡತನ ಹೊಂದಿದ ಎಷ್ಟೋ ಮಹಿಳೆಯರಿಗೆ ಇದು ಉಪಕಾರಿಯಾಗಿದೆ. ಸರ್ಕಾರಕ್ಕೆ ನಷ್ಟವಾದರೂ ಬಡವರ ಅನುಕೂಲಕ್ಕಾಗಿ ಈ ಯೋಜನೆ ಮುಂದುವರಿಸಲಾಗಿದೆ ಎಂದರು.