

ಬೀಳಗಿ: ಕಂದಾಯ ಇಲಾಖೆಯಲ್ಲಿ ಸರ್ಕಾರಿ ಸೌಲಭ್ಯ ಮತ್ತು ಇತರ ದಾಖಲೆ ಪಡೆಯಲು ಬರುವ ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿ. ಅವರು ನೀಡಿರುವ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ದೊರಕಿಸುವ ಮೂಲಕ ಗೌರದಿಂದ ಕಾಣಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಎಂ.ಹೇಳಿದರು.
ಬೀಳಗಿ ತಹಸೀಲ್ದಾರ್ ಕಾರ್ಯಾಲಯ ಕಚೇರಿಗೆ ಸೋಮವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಕಚೇರಿಯಲ್ಲಿ ಡಿಜಿಟಲ್ ಸ್ಕಾೃನ್ ಮಾಹಿತಿವುಳ್ಳ ಉತಾರ, ಡ, ವರದಿಗಳ ವಿವರಣೆ ಕಾರ್ಯನಿರ್ವಹಿಸುವ ಸಿಬ್ಬಂದಿ ಕಾರ್ಯ ವೈಖರಿ ಪರಿಶೀಲಿಸಿದರು.
ತಹಸೀಲ್ದಾರ್ ಕಚೇರಿಗೆ ಕಂದಾಯ, ಇತರ ಸೌಲಭ್ಯಕ್ಕಾಗಿ ರೈತರು, ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳು ವಿವಿಧ ಸೌಲಭ್ಯಗಳ ಹಾಗೂ ಪ್ರಮಾಣ ಪತ್ರ ಪಡೆಯಲು ಬರುತ್ತಾರೆ. ಅವರಿಗೆ ಸರಿಯಾದ ಸಮಯಕ್ಕೆ ಪೂರೈಕೆ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತೆ ನೋಡಿಕೊಳ್ಳಿ ಎಂದು ತಹಸೀಲ್ದಾರ್ ವಿನೋದ ಹತ್ತಳ್ಳಿ ಅವರಿಗೆ ಸೂಚಿಸಿದರು.
ನಂತರ ಪಟ್ಟಣದ ಗಾಂಧಿ ವೃತ್ತದಲ್ಲಿರುವ ಗ್ರಂಥಾಲಯ ಕಟ್ಟಡ ವೀಕ್ಷಣೆ ಮಾಡಿ ಗ್ರಂಥಾಲಯ ಕಟ್ಟಡ ಪೂರ್ಣ ಶಿಥಿಲಾವ್ಯವಸ್ಥೆಯಲ್ಲಿದೆ. ಇದನ್ನು ದುರಸ್ತಿ ಮಾಡಿದರೆ ಪ್ರಯೋಜನವಿಲ್ಲ. ಇದರ ಬದಲಾಗಿ ಬೇರೆ ಜಾಗ ವ್ಯವಸ್ಥೆ ಮಾಡಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲಗೆ ಸೂಚಿಸಿದರು.