

ಕೋಲಾರ: ನಗರದ ಆರ್ಟಿಒ ಕಚೇರಿಗೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಸಾರ್ವಜನಿಕರ ದೂರಿನ ಮೇರೆಗೆ ಭೇಟಿ ನೀಡಿದ್ದ ಅವರು, ಇಲಾಖೆಯ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆರ್ಟಿಒ ಕಚೇರಿಯಲ್ಲಿ ಬ್ರೋಕರ್ಗಳನ್ನು ದೂರವಿಟ್ಟು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಬೇಕು. ಚಾಲನಾ ಪರವಾನಗಿ ಹಾಗೂ ಸ್ಮಾರ್ಟ್ಕಾರ್ಡ್ ವಿತರಣೆಯಲ್ಲಿ ವಿಳಂಬದಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ಕೂಡಲೇ ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾದ್ಯಂತ ಖಾಸಗಿ ಬಸ್ಗಳು ನಿಗದಿತ ಮಾರ್ಗದಲ್ಲಿ ಅನುಮತಿ ಹೊಂದಿದ್ದರೂ ನಿಯಮಬಾಹಿರವಾಗಿ ಸಂಚರಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅನ್ಯ ಮಾರ್ಗದ ಪರ್ಮಿಟ್ ಹೊಂದಿರುವ ಬಸ್ಸುಗಳ ಪ್ರವೇಶವಾಗಿದ್ದು, ಅಂತಹ ಬಸ್ಸುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಸಂಜಯ್ರೆಡ್ಡಿ, ಮುಖಂಡರಾದ ಚೌಡರೆಡ್ಡಿ, ರಾಜಕುಮಾರ್ ಹಾಜರಿದ್ದರು.