

ಎನ್.ಆರ್.ಪುರ: ಯಾವುದೇ ಸಂದರ್ಭದಲ್ಲೂ ತುರ್ತು ಸಮಸ್ಯೆಗಳಿಗೆ ಅನುಮತಿ ಪಡೆಯಬೇಕು, ಅನುದಾನ ಬಂದಿಲ್ಲ, ಪರಿಶೀಲಿಸಲಾಗುವುದು ಎಂಬ ಸಬೂಬುಗಳನ್ನು ಹೇಳದೆ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಎಲ್ಲ ಇಲಾಖೆ ಅಧಿಕಾರಿಗಳಿಗೆ ಶಾಸಕ ಟಿ.ಡಿ.ರಾಜೇಗೌಡ ತಾಕೀತು ಮಾಡಿದರು.
ತಾಪಂ ಸಾಮರ್ಥ್ಯಸೌಧದಲ್ಲಿ ನಡೆದ ಬರ ಪರಿಸ್ಥಿತಿ ನಿರ್ವಹಣೆ ಹಾಗೂ ಸಂವಿಧಾನ ಜಾಥಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಬರ ಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಬರ ನಿರ್ವಹಣೆ ಮಾಡಲು ಎಲ್ಲ ಇಲಾಖಾಧಿಕಾರಿಗಳು ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ತುರ್ತು ಸಂದರ್ಭದಲ್ಲಿ ನನ್ನ ಅನುಮತಿಗಾಗಿ ಕಾಯಬೇಡಿ. ಕಾನೂನಿನ ಚೌಕಟ್ಟಿನಡಿ ಸಮಸ್ಯೆ ಬಗೆಹರಿಸಿ, ನಂತರ ಅನುಮೋದನೆ ಪಡೆಯಿರಿ. ಜನರ ಸಮಸ್ಯೆಗೆ ತುರ್ತು ಪರಿಹಾರ ದೊರಕಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಮಾಹಿತಿ ನೀಡಿ. ಬೋರ್‌ವೆಲ್‌ಗಳ ಮಾಲೀಕರ ವಿವರ ಪಡೆಯಿರಿ. ಟ್ಯಾಂಕರ್ ನೀರು ಪೂರೈಸುವ ಸ್ಥಿತಿ ಎದುರಾಗಬಾರದು. ಜೆಜೆಎಂ ಯೋಜನೆಯಡಿ ಮೊದಲು ನೀರಿನ ಮೂಲ ಗುರ್ತಿಸಿ ನಂತರ ಪೈಪ್‌ಲೈನ್, ಟ್ಯಾಂಕ್ ಕಾಮಗಾರಿ ಮಾಡಿ. ಇಲ್ಲವಾದಲ್ಲಿ ಕಾಮಗಾರಿ ಮಾಡಲೇ ಬೇಡಿ. ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರೊದಗಿಸುವ ಯೋಜನೆಯಿದು. ಕಾಮಗಾರಿ ಗುಣಮಟ್ಟದ್ದಾಗಿರಬೇಕು. ಹಾಗೆಯೇ ಜನರಿಗೆ ಅನುಕೂಲವಾಗಬೇಕು. ಈ ಬಗ್ಗೆ ಕುಡಿಯವ ನೀರಿನ ವಿಭಾಗದ ಇಂಜಿನಿಯರ್‌ಗಳು ವೈಯಕ್ತಿಕ ಗಮನ ಹರಿಸಬೇಕೆಂದು ತಿಳಿಸಿದರು.ಕಾಡುಪ್ರಾಣಿಗಳಿಗೆ ಕುಡಿಯುವ ನೀರಿಗಾಗಿ ಕಾಡಿನಲ್ಲಿ ಕೆರೆಗಳು, ಕೃಷಿ ಹೊಂಡ, ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಶಾಸಕರ ಬಳಿಯೂ ತುರ್ತು ಸಂದರ್ಭಕ್ಕೆಂದು ಅನುದಾನ ಮೀಸಲಿದೆ. ಅನುದಾನ ಕೊಡಿಸುವ ಜವಾಬ್ದಾರಿ ನನ್ನದು. ತಾಲೂಕಿನಲ್ಲಿ ಮೇವು ಸಾಕಷ್ಟಿದೆ. ಕೆಲ ರೈತರು ಮೇವು ಮಾರಾಟ ಮಾಡಲು ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ ಜತೆ ಚರ್ಚಿಸುತ್ತೇನೆ ಎಂದರು. ದಲಿತ ಮುಖಂಡ ಚಿತ್ರಪ್ಪ ಯರಬಾಳ್ ಮಾತನಾಡಿ, ಆಲ್ದಾರ ಗ್ರಾಮದಲ್ಲಿ ಬೋರ್‌ವೆಲ್ ಕೊರೆದು ನಾಲ್ಕು ವರ್ಷವಾಗಿದೆ. ಟ್ಯಾಂಕ್ ನಿರ್ಮಿಸಿ 2 ವರ್ಷ ಆಗಿದೆ. ಪೈಪ್‌ಲೈನ್ ಕೂಡ ಆಗಿ ವರ್ಷಗಳೇ ಕಳೆದಿವೆ. ಆದರೂ ನೀರಿನ ಸಂಪರ್ಕ ಕಲ್ಪಿಸಿಲ್ಲ ಎಂದು ದೂರಿದರು. ಶೆಟ್ಟಿಕೊಪ್ಪ ಎಂ.ಮಹೇಶ್ ಮಾತನಾಡಿ, ಕಡಹಿನಬೈಲು ಗ್ರಾಪಂನಲ್ಲಿ 3 ವರ್ಷದಿಂದ ಖಾಸಗಿ ಬೋರ್‌ವೆಲ್‌ನಿಂದ ನೀರು ಪೂರೈಸಲಾಗುತಿದೆ. ಹೊಸ ಬೋರ್‌ವೆಲ್ ಕೊರೆಸಬೇಕು ಎಂದು ಮನವಿ ಮಾಡಿದರು. ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಬೋರ್‌ವೆಲ್ ಕೊರೆಸಿ ಎಂದು ಎಇಇ ವೀರಭ್ರದಪ್ಪ ಅವರಿಗೆ ಸೂಚಿಸಿದರು. ತಾಲೂನಲ್ಲಿ ೆ.8 ಹಾಗೂ 9 ರಂದು ಸಂವಿಧಾನ ಜಾಥಾ ಸಂಚರಿಸಲಿದೆ. ಸಂವಿಧಾನ ಅಂಗೀಕಾರವಾಗಿ 75 ವರ್ಷಗಳು ತುಂಬಿದ ನೆನಪಿಗಾಗಿ ಜಾಥಾ ನಡೆಸಲಾಗುತ್ತಿದ್ದು, ಅರಿವು ಮೂಡಿಸಲಾಗುವುದು. ಕಾರ್ಯಕ್ರಮದಲ್ಲಿ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿ ಜಾಥಾ ಯಶಸ್ವಿಗೊಳಿಸಬೇಕು. ಅಧಿಕಾರಿಗಳೂ ಉಪಸ್ಥಿತರಿರಬೇಕು. ಪೊಲೀಸರು ಭದ್ರತೆ ನೀಡಬೇಕು ಎಂದು ತಿಳಿಸಿದರು.ತಹಸೀಲ್ದಾರ್ ತನುಜಾ ಟಿ. ಸವದತ್ತಿ, ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ತಾಲೂಕು ಮಟ್ಟದ ಇಲಾಖಾಧಿಕಾರಿಗಳು, ಪಿಡಿಒಗಳು ಇದ್ದರು.