ಗ್ರಾಹಕರ ಅವಶ್ಯಕತೆಗಳಿಗೆ ಸ್ಪಂದಿಸಿ

Respond to customer needs
ಅಮೀನಗಡ ಸಮೀಪದ ಸೂಳೇಭಾವಿಯಲ್ಲಿ ನಡೆದ ಗಾಯತ್ರಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿದರು. ಪ್ರಧಾನ ವ್ಯವಸ್ಥಾಪಕ ಹೇಮಂತ ಧುತ್ತರಗಿ, ಸಂಘದ ನಿರ್ದೇಶಕರಾದ ಮಲ್ಲೇಶಪ್ಪ ಧೂಪದ, ಲುಮ್ಮಣ್ಣ ಕಣಗಿ, ಜಗನ್ನಾಥ ಗಾಡಿ, ಶಂಕ್ರಪ್ಪ ಜನಿವಾರದ ಇತರರಿದ್ದರು.
Published on

ಅಮೀನಗಡ: ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಗಾಯತ್ರಿ ಪತ್ತಿನ ಸಹಕಾರ ಸಂಘ ಮುಂಚೂಣಿಯಲ್ಲಿದೆ ಎಂದು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.

ಸೂಳೇಭಾವಿ ಗ್ರಾಮದ ಶಾಖಾಂಬರಿ ಕಲ್ಯಾಣ ಮಂಟಪದಲ್ಲಿ ನಡೆದ ಗಾಯತ್ರಿ ಪತ್ತಿನ ಸಹಕಾರ ಸಂಘದ 29ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಾಯತ್ರಿ ಪತ್ತಿನ ಸಹಕಾರ ಸಂಘ ಲಾಭ ಗಳಿಸುವುದಕ್ಕಿಂತಲೂ ಗ್ರಾಹಕರ ಅವಶ್ಯಕತೆಗಳಿಗೆ ಸ್ಪಂದಿಸಿ, ಉತ್ತಮ ಸೇವೆ ನೀಡುವ ಗುರಿ ಹೊಂದಿದೆ. ಗ್ರಾಹಕರ ಸೇವೆ ನಮ್ಮ ಮೊದಲ ಗುರಿ ಎಂದರು.

ಸಹಕಾರವಿದ್ದರೆ ಮಾತ್ರ ಸಹಕಾರ ಸಂಘಗಳು ಯಶಸ್ವಿಯಾಗುತ್ತವೆ. ಗ್ರಾಹಕರ, ಆಡಳಿತ ಮಂಡಳಿ ಸದಸ್ಯರ, ಸಲಹಾ ಸಮಿತಿ ಸದಸ್ಯರ ಹಾಗೂ ಸಿಬ್ಬಂದಿ ಸಹಕಾರದಿಂದ ಸಂಸ್ಥೆ 28 ವರ್ಷಗಳನ್ನು ಯಶ್ವಸಿಯಾಗಿ ಪೂರ್ಣಗೊಳಿಸಿದೆ. ಸಂಘದ ಮೂಲಕ ನೂರಾರು ಜನ ಯುವಕರಿಗೆ ಉದ್ಯೋಗ ನೀಡಲಾಗಿದೆ. ಬಡವರಿಗೆ, ನೇಕಾರರಿಗೆ, ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಘ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 30 ಶಾಖೆ ಹೊಂದಿ, ಉತ್ತಮವಾಗಿ ಗ್ರಾಹಕರ ಸೇವೆ ಮಾಡುತ್ತಿದೆ. ಸದ್ಯ ಬ್ಯಾಂಕ್ 10 ಕೋಟಿ ರೂ. ಷೇರು ಬಂಡವಾಳ, 14,570 ಸದಸ್ಯರು, 169 ಕೋಟಿ ರೂ. ಠೇವಣಿ ಸಂಗ್ರಹಣೆ, ಒಟ್ಟು 188.59 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿ, 3 ಕೋಟಿ 4 ಲಕ್ಷ ರೂ. ಲಾಭ ಗಳಿಸಿದೆ ಎಂದರು.

ಪ್ರಧಾನ ವ್ಯವಸ್ಥಾಪಕ ಹೇಮಂತ ಧುತ್ತರಗಿ ವರದಿ ವಾಚಿಸಿದರು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಉತ್ತಮ ಗ್ರಾಹಕರ ಪ್ರಶಸ್ತಿ ಜತೆಗೆ ಉತ್ತಮ ಪಿಗ್ಮಿ ಏಜೆಂಟರನ್ನು ಸನ್ಮಾನಿಸಲಾಯಿತು.

ಸಂಘದ ನಿರ್ದೇಶಕರಾದ ಮಲ್ಲೇಶಪ್ಪ ಧೂಪದ, ಲುಮ್ಮಣ್ಣ ಕಣಗಿ, ಜಗನ್ನಾಥ ಗಾಡಿ, ಶಂಕ್ರಪ್ಪ ಜನಿವಾರದ, ರೋಮಣ್ಣ ಧುತ್ತರಗಿ, ಹನಮಪ್ಪ ಕತ್ತಿ, ಸುಭಾಶ ಭಾಪ್ರಿ, ಹನುಮಂತ ಒಡ್ಡೋಡಗಿ, ಮಹೇಶ ಜೀರಗಿ, ಸಕ್ಕೂಬಾಯಿ ಇಜೇರಿ, ಲಕ್ಷ್ಮೀಬಾಯಿ ಹನುಮಸಾಗರ, ರೋಮಣ್ಣ ಭಜಂತ್ರಿ, ನಾಗಪ್ಪ ವಾಲ್ಮೀಕಿ, ಮೈಬೂಬಸಾಬ ಮುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net