ನಾಗರಿಕರ ದೂರುಗಳಿಗೆ ತಕ್ಷಣ ಸ್ಪಂದಿಸಿರಿ: ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ಉಮಾಶಂಕರ್

acs visit
Published on

ಬೆಂಗಳೂರು: ನಗರದಲ್ಲಿ ಮಳೆಹಾನಿ ಅಥವಾ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಅಂತಹ ಸ್ಥಳಗಳಿಗೆ ತುರ್ತು ಸ್ಪಂದನಾ ತಂಡಗಳನ್ನು ಕಳುಹಿಸಿ ನಾಗಕರಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿ ಅನೆಕ್ಸ್ ಕಟ್ಟಡದಲ್ಲಿರುವ ನಿಯಂತ್ರಣ ಕೊಠಡಿ ಹಾಗೂ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗೆ (ಐಸಿಸಿಸಿ) ಬುಧವಾರ ಭೇಟಿ ನೀಡಿ ಪರಿಶೀಲಿಸಿ ಈ ಸೂಚನೆ ನೀಡಿದರು.

ಮುಂಗಾರು ಆರಂಭವಾಗಿದ್ದು ಹೆಚ್ಚು ಮಳೆಯಾಗುವ ಹಿನ್ನೆಲೆಯಲ್ಲಿ ಪಾಲಿಕೆ ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಕಾರ್ಯವೈಖರಿಯನ್ನು ಪರಿಶೀಲಿಸಿದರು. ನಿಯಂತ್ರಣ ಕೊಠಡಿಯನ್ನು ಸರಿಯಾಗಿ ಮೇಲ್ವಿಚಾರಣೆ ಮಾಡುತ್ತಾ ನಾಗರಿಕರಿಂದ ಬರುವ ದೂರುಗಳಿಗೆ ಕೂಡಲೇ ಸ್ಪಂದಿಸಲು ತಿಳಿಸಿದರು.

ಈ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಪಾಲಿಕೆಯ ಸಹಾಯವಾಣಿ ಸಂಖ್ಯೆ 1533ಗೆ ನಾಗರಿಕರಿಂದ ದೂರುಗಳು ಬಂದಲ್ಲಿ, ಅಂತಹ ಕರೆಗಳನ್ನು ನಿಯೋಜಿಸಲ್ಪಟ್ಟ ಸಿಬ್ಬಂದಿಗಳು ಸ್ವೀಕರಿಸಿ ಸಹಾಯ 2.0 ತಂತ್ರಾಂಶದಲ್ಲಿ ದೂರು ದಾಖಲಿಸುತ್ತಾರೆ. ಬಳಿಕ ಸಂಬಂಧಿಸಿದ ಅಧಿಕಾರಿಗಳಿಗೆ ದೂರಿನ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಐಸಿಸಿಸಿ ಕೇಂದ್ರ ಪರಿಶೀಲನೆ:

ಬೆಂಗಳೂರು ಸ್ಮಾರ್ಟ್ ಸಿಟಿ ಮೂಲಕ ಸ್ಥಾಪಿಸಿರುವ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗೆ (ಐಸಿಸಿಸಿ) ಭೇಟಿ ನೀಡಿ ಪರಿಶೀಲಿಸಿದ ಎಸ್.ಆರ್.ಉಮಾಶಂಕರ್, ಕೇಂದ್ರವು ಹೇಗೆ ಕಾರ್ಯನಿರ್ವಹಿಸಲಿದೆ, ಯಾವ್ಯಾವುದನ್ನು ಮೇಲ್ವಿಚಾರಣೆ ಮಾಡಲಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು.

ಸೆನ್ಸಾರ್ ಮೇಲ್ವಿಚಾರಣೆ ಪರಿಶೀಲನೆ:

ನಗರದಲ್ಲಿರುವ ರಾಜಕಾಲುವೆಗಳಲ್ಲಿ ಕೆಎಸ್‌ಎನ್‌ಡಿಎಂಸಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವತಿಯಿಂದ ನೀರಿನ ಮಟ್ಟವನ್ನು ಅಳೆಯುವ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ. ಅದನ್ನು ಐಸಿಸಿಸಿ ಕೇಂದ್ರದಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಅದು ಯಾವ ರೀತಿ ಕಾರ್ಯನಿರ್ವಹಿಸಲಿದೆ, ಇದರಿಂದಾಗುವ ಅನುಕೂಲ ಸೇರಿ ಇನ್ನಿತರ ವಿಷಯಗಳ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ಸೇರಿ ಇನ್ನಿತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net