ನಾಗರಿಕರ ದೂರುಗಳಿಗೆ ಎರಡು ತಿಂಗಳ ಒಳಗೆ ಸ್ಪಂದಿಸಿ

CTD 11 Road Safety Meeting-04
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಗುರುತಿಸಿರುವ ಅಪಘಾತ ಸ್ಥಳ,ಅಪಘಾತಗಳಿಗೆ ಕಾರಣ ಏನೆಂದು ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಾಕೀತು ಮಾಡಿದರು.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾಗೂ ಜಿಲ್ಲಾ ರಕ್ಷಣಾ ಇಲಾಖೆ ಜಿಪಂದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉ ದ್ಘಾಟಿಸಿ ಮಾತನಾಡಿ,ಪ್ರತಿ 3 ತಿಂಗಳಿಗೊಮ್ಮೆ ಡಿಸಿ ಅಧ್ಯಕ್ಷತೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಸಭೆಗಳನ್ನು ನಡೆಸಿ,ಸಾರ್ವಜನಿಕರ ದೂರು, ಸಮಸ್ಯೆಗಳಿಗೆ 2ತಿಂಗಳ ಒಳಗೆ ವೈಜ್ಞಾನಿಕವಾಗಿ ಪರಿಹಾರ ಒದಗಿಸ ಬೇಕು.

ಕೇಂದ್ರ ಸಾರಿಗೆ ಸಚಿವ ನಿತನ್‌ಗಡ್ಕರಿ ಅವರು ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಸಂಸದರ ಪಾತ್ರ ಹೆಚ್ಚಿದ್ದು,ಸಮಸ್ಯೆಗಳ ಕುರಿತು ಚರ್ಚಿಸುವಂತೆ ತಿಳಿಸಿದ್ದಾರೆ. ರಸ್ತೆ ಸುರಕ್ಷತೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಮರಣ ಹೊಂದಿ ದವ ರಿಗಿಂತ,ಅಪಘಾತಗಳಲ್ಲಿ ಮೃತಪಟ್ಟಿರುವವರ ಸಂಖ್ಯೆ ಹೆಚ್ಚಿರುವುದು ವಿಷಾದನೀಯ.

ಅಪಘಾತಗಳ ನಿಯಂತ್ರಿಸಲು,ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಸವಲತ್ತುಗಳನ್ನು ಅಳವಡಿಸಬೇಕೆಂದರು. ನಗರದಲ್ಲಿ ರೋಡ್ ಡಿವೈಡರ್‌ಗಳಿಂದಾಗುತ್ತಿರುವ ತೊಂದರೆ,ಅಪಘಾತಗಳ ಕುರಿತಂತೆ ಸಮೀಕ್ಷೆ ನಡೆಸಲಾಗುವುದು. ಅವೈಜ್ಞಾನಿಕವಾಗಿ ಡಿವೈಡರ್‌ಗಳನ್ನು ನಿರ್ಮಿಸಿದ್ದರೆ ತೆರವುಗೊಳಿಸುವುದಾಗಿ ಹೇಳಿದರು. ನಾಗರಿಕರು ನಿಯಮ ಮೀರಿ ವಾಹನ ಚಲಾಯಿಸಬಾರದೆಂದರು.

ಡಿಸಿ ಜೆಆರ್‌ಜೆ ದಿವ್ಯಾಪ್ರಭು ಮಾತನಾಡಿ,ಈ ಸಪ್ತಾಹ ಜ.17ರವರೆಗೆ ನಡೆಯಲಿದೆ. ರಸ್ತೆ ಸುರಕ್ಷತೆ ಜೀವ ರಕ್ಷಣೆಯೂ ಹೌದು. ಪ್ರತಿಯೊಬ್ಬರು ಇಂದು ಒತ್ತಡ ಜೀವನ ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ,ಸಂಚರಿಸುವ ಪ್ರತಿಯೊಬ್ಬರೂ ಸುರಕ್ಷತೆ ಕಡೆ ನಿಗಾ ವಹಿಸಬೇಕೆಂದರು.

ಎಸ್‌ಪಿ ಕೆ.ಪರುಶುರಾಮ್,ಜಿ.ಪಂ.ಸಿಇಒ ಎಂ.ಎಸ್.ದಿವಾಕರ ಮಾತನಾಡಿದರು. ರಸ್ತೆ ಅಪಘಾತದ ಗಾಯಾಳುಗಳ ಜೀವ ರಕ್ಷಕರಾದ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಡಿ. ರಂಗಸ್ವಾಮಿ ಮತ್ತವರ ತಂಡವನ್ನು ಸನ್ಮಾನಿಸಲಾಯಿತು. ಕಲಾವಿದ ಡಿ.ಒ.ಮುರಾರ್ಜಿ ನಾಡಗೀತೆ ಪ್ರಸ್ತುತ ಪಡಿಸಿದರು. ಎಎಸ್‌ಪಿ ಎಚ್.ಜೆ.ಕುಮಾರಸ್ವಾಮಿ ಸ್ವಾಗತಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುಥೇಶ್,ಲೋಕೋಪಯೋಗಿ ಇಲಾಖೆ ಮುಖ್ಯಇಂಜಿನಿಯರ್ ಟಿ.ಎಸ್.ಮಲ್ಲಿಕಾರ್ಜುನ,ಜಿಲ್ಲಾ ವೈದ್ಯಾಧಿಕಾರಿ ರೇಣುಪ್ರಸಾದ್,ಕೆಎಸ್‌ಆರ್‌ಟಿಸಿ ಡಿಟಿಒ ಮಂಜುನಾಥ್ ಮತ್ತಿತರ ಅಧಿಕಾರಿಗಳಿದ್ದರು.

ಸಪ್ತಾಹದಲ್ಲಿ ಕೇಳಿ ಬಂದ ಸಲಹೆಗಳು

ನಗರದಲ್ಲಿ ಜಾಗ ಕಿರಿದಾಗಿದ್ದು,ಸೂಕ್ತ ಪಾಕಿರ್ಂಗ್ ವ್ಯವಸ್ಥೆ ಇಲ್ಲ. ಆಟೋಗಳನ್ನು ನಿಲ್ಲಿಸಲು ಸ್ಥಳ ಗುರುತಿಸಬೇಕು.ಬಸವೇಶ್ವರ ಆಸ್ಪತ್ರೆ ಅಂಡರ್ ಪಾಸ್ ಮತ್ತು ಸರ್ವೀಸ್ ರಸ್ತೆಗಳಲ್ಲಿ ವಿದ್ಯುತ್‌ದೀಪಗಳನ್ನು ಅಳವಡಿಸಬೇಕು. ಅವೈಜ್ಞಾನಿಕ ಡಿವೈಡರ್‌ಗಳನ್ನು ತೆರವುಗೊಳಿಸಬೇಕು.ಶಾಲಾ- ಕಾಲೇಜುಗಳ ಬಳಿ ಹಂಪ್ ಹಾಗೂ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಬೇಕು. ರಾ.ಹೆ.48 ಹಿರಿಯೂರು ಬಳಿ ಟ್ರಕ್ ಟರ್ಮಿನಲ್ ಹಾಗೂ ನಗರದ ಚಳ್ಳಕೆರೆ ಬೈಪಾಸ್ ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಿಸಬೇಕು. ರಸ್ತೆ ಕಿರಿದಾಗಿರುವುದರಿಂದ ನಗರದ ಎಸ್‌ಬಿಐ ವೃತ್ತದಿಂದ ಗಾಂಧಿ ವೃತ್ತದವರೆಗೆ ವಾಹನಗಳ ಪಾಕಿರ್ಂಗ್ ಅವಕಾಶ ಕೊಡಬಾರದು.

ಕೋಟ್

ದೇಶದಲ್ಲಿ ಪ್ರತಿ ವರ್ಷ ಆಗುವ ರಸ್ತೆ ಅಪಘಾತಗಳಲ್ಲಿ 1.55 ಲಕ್ಷ ಜನರು ಮರಣ ಹೊಂದಿದರೆ,3.75 ಲಕ್ಷ ಜನರು ಶಾಶ್ವತ ಅಂಗವಿಕಲತೆಗೆ ತು ತ್ತಾಗುತ್ತಿದ್ದಾರೆ. ಕೊವಿಡ್‌ನಿಂದಾಗಿ ದೇಶದಲ್ಲಿ 5.30 ಲಕ್ಷ ಜನ ಮೃತರಾದರೆ,ಇಷ್ಟೇ ಸಂಖ್ಯೆ ಜನರು ಪ್ರತಿ ವರ್ಷ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಾದ 396 ಅಪಘಾತಗಳಲ್ಲಿ 415 ಜನರು ಮೃತರಾಗಿದ್ದಾರೆ. 1323 ಜನರು ಅಂಗವಿಕಲಕತೆಗೆ ಅಥವಾ ಗಂಭೀರವಾದ ಗಾಯಗಳಿಗೆ ತುತ್ತಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 80 ಸಾವಿರ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸರು ದಂಡ ವಿಧಿಸುವುದು ಸರ್ಕಾರಕ್ಕೆ ಆದಾಯ ತರುವುದಕ್ಕ್ಕೆ ಅಲ್ಲ.

ಕೆ.ಪರಶುರಾಮ್,ಎಸ್ಪಿ,ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net