ಕಲಾವಿದರ ಸಮಸ್ಯೆಗೆ ಸ್ಪಂದಿಸಿ

BLY- 28-4
ಜಿಲ್ಲೆಯ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿ ಜಿಲ್ಲಾ ಕಲಾವಿದರ ವೇದಿಕೆ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಬಳ್ಳಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಮುಖಂಡರಾದ ಕೆ. ಜಗದೀಶ್, ಮಂಜುನಾಥ್, ಸುಬ್ಬಣ್ಣ, ಹೊನ್ನೂರಸ್ವಾಮಿ, ಸುಂಕಪ್ಪ, ಹೊನ್ನುರುವಲಿ ಮತ್ತಿತರರಿದ್ದರು.
Published on

ಬಳ್ಳಾರಿ : ಜಿಲ್ಲೆಯ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿ ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಕಲಾರಂಗದ ಜ್ವಲಂತ ಸಮಸ್ಯೆಗಳ ಬಗ್ಗೆ ಕಳೆದ ಮೂರು ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಪಂದಿಸುತ್ತಿಲ್ಲ. 2021 ರಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಎನ್‌ಎಂಡಿಸಿ ಸಂಸ್ಥೆ ನೀಡಿದ ಹಣದಿಂದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರವನ್ನು ದುರಸ್ತಿ ಮಾಡಲಾಯಿತು. ಅಲ್ಲಿನ ವೇದಿಕೆಯ ಧ್ವನಿ ಬೆಳಕು ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಕಲಾವಿದರು ಒತ್ತಾಯಿಸಿದರು.

1996ರಲ್ಲಿ ಉದ್ಘಾಟನೆಯಾದ ರಂಗಮಂದಿರ 27 ವರ್ಷಗಳಾದರೂ ಆವರಣದಲ್ಲಿ ಡಾ. ಜೋಳದರಾಶಿ ದೊಡ್ಡನಗೌಡರ ಪ್ರತಿಮೆ ಪ್ರತಿಷ್ಠಾಪನೆಯಾಗಿಲ್ಲ. ಅವರ ಪ್ರತಿಮೆ ನಿರ್ಮಾಣವಾಗಬೇಕು. ಅಶಕ್ತ ಕಲಾವಿದರಿಗೆ ಮಾಸಾಶನ ನೀಡುವಲ್ಲಿ ವಿಳಂಬವಾಗುತ್ತಿದೆ. ಪ್ರತಿ ತಿಂಗಳು ತಪ್ಪದೆ ಸಕಾಲಕ್ಕೆ ಪಿಂಚಣಿ ಜಮೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ತಾಲೂಕಿಗೊಂದು ಸರ್ಕಾರಿ ರಂಗಮಂದಿರ ನಿರ್ಮಾಣವಾಗಿಲ್ಲ. ಅಖಂಡ ಬಳ್ಳಾರಿ ಜಿಲ್ಲೆಯ ಹೆಮ್ಮೆಯ ಕಲೆ ಬಯಲಾಟಕ್ಕೆ ಸೂಕ್ತ ವೇದಿಕೆಗಳಿಲ್ಲ. ರಂಗ ಪದವೀಧರರ ನೇಮಕಾತಿ 2008 ರಿಂದ ಮಾಡಿಲ್ಲ. ಹೀಗಾಗಿ ರಂಗ ಶಿಕ್ಷಣ ನೀಡುವ ಬಳ್ಳಾರಿಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ನಿರುದ್ಯೋಗಿಗಳನ್ನು ಉತ್ಪಾದಿಸುವ ಕಾರ್ಖಾನೆಗಳಂತಾಗಿವೆ. ಸಕಾಲದಲ್ಲಿ ಸೂಕ್ತ ಅವಕಾಶಗಳಿಲ್ಲದೆ ನಿರುತ್ಸಾಹಗೊಂಡು ರಂಗಭೂಮಿಯಿಂದ ರಂಗಪದವೀಧರರು ವಿಮುಖರಾಗಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಕಲಾವಿದರು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಕೆ. ಜಗದೀಶ್, ಮಂಜುನಾಥ್, ಸುಬ್ಬಣ್ಣ, ಹೊನ್ನೂರಸ್ವಾಮಿ, ಸುಂಕಪ್ಪ, ಹೊನ್ನುರುವಲಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net