

ಹುನಗುಂದ: ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಎಲ್ಲ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ಪಟ್ಟಿ ಮಾಡಿ ನೀಡಲಾಗಿದ್ದು, ಅವುಗಳ ವಿಲೇವಾರಿಗೆ ಯಾವುದೇ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಬಾರದು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೂಚಿಸಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಜನಸ್ವಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 111 ಅರ್ಜಿಗಳು ಸಲ್ಲಿಕೆಯಾಗಿವೆ. ಯುಕೆಪಿ, ನಿವೇಶನ ಮಂಜೂರಾತಿ, ಮೂಲ ಸೌಲಭ್ಯಕ್ಕೆ ಒತ್ತಾಯಿಸಿ ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು. ಈ ಕಾರ್ಯಕ್ರಮವು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಜನರ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲು ಮುಖ್ಯಮಂತ್ರಿಗಳ ಆದೇಶವಾಗಿದೆ ಎಂದು ತಿಳಿಸಿದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ರೈತರು, ಕಾರ್ಮಿಕರು, ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ತಕ್ಷಣದಲ್ಲಿ ಕ್ರಮ ಕೈಗೊಂಡು ಒಂದು ವಾರದಲ್ಲಿ ಉತ್ತರ ನೀಡಬೇಕು. ಜನಸ್ಪಂದನ ಮೂಲಕ ಪ್ರಜೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದು ಗ್ರಾಮ ಮಟ್ಟದಲ್ಲೂ ನಡೆದು ಜನರ ಸಮಸ್ಯೆಗೆ ದನಿಯಾಗಲಿದೆ ಎಂದು ಹೇಳಿದರು.
ಘಟ್ಟಿಗನೂರ ಗ್ರಾಮಸ್ಥರು ಹುನಗುಂದದಿಂದ ನಿಡಸನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ದುರಸ್ತಿ ಮಾಡುವಂತೆ ಶಾಸಕ ವಿಜಯಾನಂದ ಕಾಶಪ್ಪನವರ ಜಿಪಂ ಅಧಿಕಾರಿಗಳಿಗೆ ಸೂಚಿಸಿದರು.
ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಬಂದಿಲ್ಲ. ಕೂಡಲೇ ರೈತರ ಖಾತೆಗಳಿಗೆ ಪರಿಹಾರ ಹಣ ಬಿಡುಗಡೆ ಮಾಡುವಂತೆ ರೈತ ಸಂಘದವರು ಡಿಸಿಗೆ ಅರ್ಜಿ ಸಲ್ಲಿಸಿದರು. ಹಿರೇಹಳ್ಳ ಹೂಳು ತೆಗೆಸುವಂತೆ ಮತ್ತು ಪಟ್ಟಣದ ಬಡಾವಣೆಗಳಲ್ಲಿ ರಸ್ತೆಗಳನ್ನು ನಿರ್ಮಿಸಬೇಕು. ಬೀದಿ ದೀಪ ಅಳವಡಿಸಬೇಕು. ಒಳಚರಂಡಿ ಕಾಮಗಾರಿ ಆರಂಭಿಸಬೇಕು. ಸರ್ಕಾರಿ ಐಟಿಐ ಕಾಲೇಜಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಜಿ.ಬಿ.ಕಂಬಾಳಿಮಠ ಶಾಸಕರಿಗೆ ಅರ್ಜಿಗಳನ್ನು ಸಲ್ಲಿಸಿದರು.
ಜಿಪಂ ಸಿಇಒ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಸಿಪಿಐ ಸುನೀಲ ಸವದಿ, ಬಿಇಒ ಜಾಸ್ಮೀನ ಕಿಲ್ಲೇದಾರ್, ಪಿಎಸ್‌ಐ ಚನ್ನಯ್ಯ ದೇವೂರ ಸೇರಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.