ಜನರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸಿ: ತಾಪಂ ಕಾನಿ ಅಧಿಕಾರಿ ಮಲ್ಲಿಕಾರ್ಜುನ ಸೂಚನೆ

Byadagi meeting
Published on

ಬ್ಯಾಡಗಿ: ಗ್ರಾಮಗಳ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳು ಸದುಪಯೋಗವಾಗಬೇಕು. ಕಾರ್ಯಕ್ರಮ ಅನುಷ್ಠಾನಕ್ಕೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ತಿಳಿಸಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಗ್ರಾ.ಪಂ. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಏರ್ಪಡಿಸಿದ್ದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಉಂಟಾಗುವ ಬಹುತೇಕ ಸಮಸ್ಯೆಗಳಿಗೆ ಆಯಾ ಗ್ರಾಮದ ಮುಖಂಡರು ಹಾಗೂ ಸ್ಥಳೀಯ ಗ್ರಾ.ಪಂ. ಸದಸ್ಯರು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಗ್ರಾಮದ ಅಭಿವೃದ್ಧಿಗೆ ಸ್ಥಳೀಯರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯರ ಸಮನ್ವಯತೆ ಪಡೆದು ಉತ್ತಮ ಆಡಳಿತ ನೀಡಬೇಕು. ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ತಕ್ಷಣ ಪರಿಹಾರ ಕಂಡುಕೊಳ್ಳಲು ಪಿಡಿಒಗಳು ಯತ್ನಿಸಬೇಕು. ಎಲ್ಲದಕ್ಕೂ ಮೇಲಧಿಕಾರಿಗಳತ್ತ ಬೊಟ್ಟು ಮಾಡುವುದನ್ನು ಬಿಟ್ಟು, ತಮ್ಮ ವ್ಯಾಪ್ತಿಯಲ್ಲಿ ಲಭ್ಯವಿರುವ ಸೌಲಭ್ಯ, ಅಧಿಕಾರ ಬಳಸಿಕೊಂಡು ಪ್ರಾಮಾಣಿಕ ಸೇವೆ ಒದಗಿಸಬೇಕು ಎಂದು ತಿಳಿ ಹೇಳಿದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ತಾಲೂಕಿನಲ್ಲಿ ಮಳೆಯ ಅಭಾವ ಹೆಚ್ಚಾಗಿದ್ದು, ಎಲ್ಲೆಡೆ ಬೆಳೆ ಒಣಗುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಮುನ್ನ ಅಧಿಕಾರಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಈಗಿರುವ ಕೊಳವೆ ಬಾವಿಗಳನ್ನು ದುರಸ್ತಿ ಮಾಡಿ ಸದ್ಬಳಕೆ ಮಾಡಿಕೊಳ್ಳಬೇಕು. ಸಮಸ್ಯೆ ಉದ್ಭವಿಸುವ ಮುನ್ನವೇ ಎಚ್ಚರಿಕೆ ವಹಿಸಬೇಕು ಎಂದರು.

ಕಾಗಿನೆಲೆ ಗ್ರಾ.ಪಂ. ಅಧ್ಯಕ್ಷೆ ಗುತ್ತೆವ್ವ ದುರುಮುರಗಿ, ಉಪಾಧ್ಯಕ್ಷೆ ಪ್ರೇಮಾ ಜೋಗುಳ, ಹಿರೇಹಳ್ಳಿ ಅಧ್ಯಕ್ಷ ಶಿವನಗೌಡ ಪಾಟೀಲ, ಶಿವರಾಯಪ್ಪ ಕಾಶಂಬಿ, ಕುಮ್ಮೂರು ಅಧ್ಯಕ್ಷ ಲಕ್ಷಣ ಹಾವೇರಿ, ಉಪಾಧ್ಯಕ್ಷೆ ನೀಲವ್ವ ಹರಿಜನ, ಕಲ್ಲೆದೇವರು ಅಧ್ಯಕ್ಷ ವೀರಯ್ಯ ಹಿರೇಮಠ ಹಾಗೂ ಉಪಾಧ್ಯಕ್ಷೆ ಪುಷ್ಪಾ ನೇಕಾರ, ಘಾಳಪೂಜಿ ಗ್ರಾ.ಪಂ. ಅಧ್ಯಕ್ಷ ಮಂಜಪ್ಪ ಅಂಗರಗಟ್ಟಿ ಹಾಗೂ ಉಪಾಧ್ಯಕ್ಷೆ ಕವಿತಾ ತಳವಾರ ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ತಾ.ಪಂ. ಕಾರ್ಯನಿರ್ವಾಹಕ ವ್ಯವಸ್ಥಾಪಕ ಪ್ರಕಾಶ ಹಿರೇಮಠ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ವಿಶ್ವನಾಥ ಕಟ್ಟೇಗೌಡ್ರ, ಸತೀಶ ಮೂಡೇರ, ಮಲ್ಲೇಶ ಎಂ., ಕೋಟೆಪ್ಪ ಪುಟ್ಟಪ್ಪನವರ, ಗೌಸಮೋದಿನ ತಹಸೀಲ್ದಾರ್, ಬಸವರಾಜ ಶಿಡ್ರಳ್ಳಿ, ಗದಿಗೆಪ್ಪ ಕೊಪ್ಪದ, ರಾಜು ಹಾದಿಮನಿ, ಜಗದೀಶ ಮಣ್ಣಮ್ಮನವರ, ಪ್ರವೀಣಕುಮಾರ ಬಿಜ್ಜೂರು, ಲತಾ ತಬರೆಡ್ಡಿ, ಶಾರದಾ ಕುದರಿ, ನಾಗರಾಜ ಹಡಗಲಿ, ಗೋಪಾಲಸ್ವಾಮಿ ಎಂ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net