ಕಲ್ಪತರು ನಾಡಿನ ಜನರ ನಿರೀಕ್ಷೆ ಹುಸಿಗೊಳಿಸಿದ ಬಜೆಟ್‌

08Tmk_Swamiji_SmruthiVana_03
Published on

ತುಮಕೂರು : ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ಕೊಡುಗೆಯನ್ನು ಸಿಎಂ ಯಡಿಯೂರಪ್ಪ ನೀಡದೇ ಇರುವುದು ಕಲ್ಪತರು ನಾಡಿನ ಜನರ ನಿರೀಕ್ಷೆ ಹುಸಿಗೊಳಿಸಿದೆ. ಹೇಮೆನಾಲೆ ಆಧುನೀಕರಣಕ್ಕೆ ಅನುದಾನ ನಿರೀಕ್ಷೆ, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸಂಸ್ಥೆ ಸ್ಥಾಪನೆ, ಗಣಿಬಾಧಿತ ತಿಪಟೂರು ತಾಲೂಕು ಕಿಬ್ಬನಹಳ್ಳಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸೇರಿ ಜಿಲ್ಲೆಯ ಜನಪ್ರತಿನಿಧಿಗಳ ಬೇಡಿಕೆಗಳಿಗೆ ಸಿಎಂ ಸ್ಪಂದಿಸದೇ ಇರುವುದು ಐವರು ಬಿಜೆಪಿ ಶಾಸಕರಿಗೆ ಆಘಾತ ತಂದಿದೆ.

ಮಹಿಳಾ ದಿನಾಚರಣೆಯಂದು ಬಜೆಟ್ ಮಂಡಿಸಿದ ಸಿಎಂ ಯಡಿಯೂರಪ್ಪ ಸ್ತ್ರೀ ಕಲ್ಯಾಣಕ್ಕಾಗಿ 37188 ಕೋಟಿ ರೂ., ಅನುದಾನ ಮೀಸಲಿಡುವ ಮೂಲಕ ಮಹಿಳಾ ಸ್ನೇಹಿ ಬಜೆಟ್ ಮಂಡಿಸಿರುವುದು ಸ್ವಾಗತಾರ್ಹವೆನಿಸಿದರೂ ಜಿಲ್ಲೆಯ ಪಾಲಿಗೆ ‘ಬಜೆಟ್’ ನಿರಾಸೆ ತಂದಿದೆ. ಕಳೆದ ಬಾರಿಯಂತೆ ಯಾವುದೇ ಹೊಸ ಯೋಜನೆಗಳು ಬಜೆಟ್‌ನಲ್ಲಿ ಜಿಲ್ಲೆಗೆ ದೊರೆತಿಲ್ಲ.

ಶ್ರೀಗಳ ಹೆಸರಲ್ಲಿ ಸ್ಮತಿವನಕ್ಕೆ 2 ಕೋಟಿ: ಶಿವಕುಮಾರ ಶ್ರೀಗಳ ಹೆಸರಲ್ಲಿ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ತುಮಕೂರು ತಾಲೂಕಿನ ಬಸದಿಬೆಟ್ಟದ ತಪ್ಪಲಲ್ಲಿ ಶಿವಕುಮಾರ ಶ್ರೀಗಳ ಜೈವಿಕವನ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ಜೈವಿಕವನವನ್ನು ಸಸ್ಯಕಾಶಿಯನ್ನಾಗಿ ಮಾಡಲು ಶ್ರೀಗಳ ಹೆಸರಲ್ಲಿ ‘ಸ್ಮತಿವನ’ಕ್ಕೆ 2 ಕೋಟಿ ರೂ.,ಗಳನ್ನು ಘೋಷಣೆ ಮಾಡಿರುವುದಷ್ಟೇ ಸಮಾಧಾನಕರ ಅಂಶವೆನಿಸಿದೆ.

ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ತುಮಕೂರು ಹಾಗೂ ಇತರ 4 ಜಿಲ್ಲೆಗಳಿಗೆ ಹರಿಸುವ ಮೂಲಕ ಅಂತರ್ಜಲ ಅಭಿವೃದ್ಧಿಗೆ ಒತ್ತುಕೊಡಲು ಅನುದಾನ ನೀಡಿರುವುದು ಬಿಟ್ಟರೆ ಹೇಮೆ ನಾಲೆ ಆಧುನೀಕರಣ, ಎತ್ತಿನಹೊಳೆ ಯೋಜನೆ, ಭದ್ರಾ ಮೇಲ್ಡಂಡೆ ಯೋಜನೆಗೆ ಹೆಚ್ಚಿನ ಅನುದಾನ ನೀಡದಿರುವುದು ಅಸಮಾಧಾನವೆನಿಸಿದೆ. ತುಮಕೂರಿನಲ್ಲಿ ಎತ್ತಿನಹೊಳೆ ಭೂ ಸ್ವಾಧೀನಕ್ಕೆ ನೆರವು ಘೋಷಣೆ ಭೂಮಿ ಕಳೆದುಕೊಂಡಿರುವ ರೈತರಿಗೆ ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇನ್ನುಳಿದಂತೆ ವಿಮಾನ ನಿಲ್ದಾಣಕ್ಕೆ ಜಾಗ ಕೊಡುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹೇಮೆ ನಾಲೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಟ್ಟಿಲ್ಲ. ವಿವಿ ಹೊಸ ಕ್ಯಾಂಪಸ್‌ಗೆ ಅನುದಾನಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಬಗ್ಗೆಯೂ ಚಕಾರವೆತ್ತಿಲ್ಲ. ತೋಟಗಾರಿಕಾ ಕಾಲೇಜು, ಕೋಕನಟ್ ಟೆಕ್ನಾಲಜಿ ಪಾರ್ಕ್ ಹಾಗೂ ಶಿರಾ ತಾಲೂಕು ಚಿಕ್ಕನಹಳ್ಳಿಯಲ್ಲಿರುವ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಪದವಿ ಕಾಲೇಜು ಸ್ಥಾಪನೆ ಸೇರಿ ಎಲ್ಲ ನಿರೀಕ್ಷೆಗಳು ಹುಸಿಯಾಗಿವೆ.

ಜಿಲ್ಲೆಗೆ ಹಲವು ವರ್ಷದ ಬೇಡಿಕೆಗಳಾದ ಹಲಸಿನ ಪಾರ್ಕ್, ತೆಂಗಿನ ಪಾರ್ಕ್, ಟೆಕ್ಸ್‌ಟೈಲ್ ಪಾರ್ಕ್, ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಮಾರ್ಗ ಹಾಗೂ ದಾವಣಗೆರೆ-ತುಮಕೂರು ಮತ್ತು ರಾಯದುರ್ಗ-ತುಮಕೂರು ರೈಲು ಮಾರ್ಗ ಜೋಡಣೆ ಯೋಜನೆಗಳು ಕನಸಾಗೇ ಉಳಿದಿವೆ. ಒಟ್ಟಾರೆ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರ, ವಿದ್ಯಾಕ್ಷೇತ್ರ, ಕೃಷಿ-ನೀರಾವರಿಗೆ ಆದ್ಯತೆ ನೀಡಿರುವುದು ಸಮಾಧಾನಕರ. ಟಿ.ಜೆ.ಗಿರೀಶ್ ಉಪಾಧ್ಯಕ್ಷರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ರಾಜ್ಯದಲ್ಲಿ 1 ಸಾವಿರ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಒತ್ತುಕೊಟ್ಟಿರುವುದು ಇಂಧನ ಉಳಿತಾಯಕ್ಕೆ ಪೂರಕವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ 500 ಕೋಟಿ ರೂ., ನೀಡುವುದರಿಂದ ಬೆಂಗಳೂರಿನ ಸುತ್ತ ಮುತ್ತಲಿನ ಪ್ರವಾಸಿ ತಾಣಗಳ ಅಭಿವೃದ್ಧಿಯ ನಿರೀಕ್ಷೆ ಇದೆ. ಉಪನಗರ ರೈಲ್ವೆ ಯೋಜನೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗಾರಿಕಾ ಪ್ರತ್ಯೇಕ ಆಸ್ತಿ ತೆರಿಗೆ ಸ್ಲ್ಯಾಬ್ ನಿಗದಿ ಕ್ರಮ ವಹಿಸಿರುವುದು ಸ್ವಾಗತಾರ್ಹ. ಎಂ.ಎನ್.ಲೋಕೇಶ್ ಅಧ್ಯಕ್ಷ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇತಿಹಾಸ ಇರುವ ಜಾತಿಗೆ ಘೋರ ಅನ್ಯಾಯ. ಬಹುಸಂಖ್ಯಾತ ಬಲವುಳ್ಳ ಜಾತಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ದ್ವಾಪರಯುಗ, ತ್ರೇತಾಯುಗ, ಕಲಿಯುಗದಲ್ಲೂ ಇರುವ ಗೊಲ್ಲರಿಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಶ್ರೀಕೃಷ್ಣನ ಶಾಪ ಬಿಜೆಪಿ ತಟ್ಟಲಿದೆ. ನಮ್ಮಲ್ಲಿ ಒಗ್ಗಟ್ಟಿಲ್ಲ. ಬದ್ಧತೆ ಇಲ್ಲ. ಹಾಗಾಗಿ, ನಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಜಿ.ಎಂ.ಸಣ್ಣಮುದ್ದಯ್ಯ ಮಾಜಿ ಅಧ್ಯಕ್ಷ, ಜಿಲ್ಲಾ ಸರ್ಕಾರಿ ನೌಕರರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net