

ಅಳವಂಡಿ: ಸಂವಿಧಾನ ಹೆಣ್ಣು, ಗಂಡು ಎಂಬ ಭೇದವಿಲ್ಲದೇ ಪ್ರತಿಯೊಬ್ಬರಿಗೂ ಸಮಾನವಾಗಿ ಜೀವಿಸುವ ಹಕ್ಕು ನೀಡಿದೆ ಎಂದು ಕೆಎಚ್‌ಪಿಟಿ ಕ್ಷೇತ್ರ ಸಂಯೋಜಕಿ ಲತಾ ತಿಳಿಸಿದರು.
ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಕೆಎಚ್‌ಪಿಟಿ, ಗ್ರಾಪಂ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಹೆಣ್ಣು ಮಗು ಎದುರಿಸುತ್ತಿರುವ ಎಲ್ಲ ತಾರತಮ್ಯ ತೊಡೆದು ಹಾಕಬೇಕಾಗಿದೆ. ಹೆಣ್ಣು ಮಕ್ಕಳಿಗೆ ದೊರೆಯಬೇಕಾದ ಗೌರವ, ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಹಕಾರ ಸಂಘದ ಅಧ್ಯಕ್ಷ ಅಂದಾನಪ್ಪ ಡಂಬಳ ಮಾತನಾಡಿ, ಪಾಲಕರು ಹೆಣ್ಣು ಮಗು ಎಂದು ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ. ಗಂಡು ಹೆಣ್ಣು ಎಂಬ ಲಿಂಗ ತಾರತಮ್ಯ ಬಿಟ್ಟು ಎಲ್ಲರನ್ನು ಒಂದೇ ರೀತಿ ನೋಡಿಕೊಳ್ಳಬೇಕು. ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹ ತಡೆಗಟ್ಟಬೇಕು ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಮುರ್ಲಾಪುರ, ಬೆಳಗಟ್ಟಿ, ಹಟ್ಟಿ, ಹೈದರನಗರ, ಘಟ್ಟಿರಡ್ಡಿಹಾಳ, ರಘುನಾಥನಹಳ್ಳಿ ಗ್ರಾಮದ ಹೆಣ್ಣು ಮಕ್ಕಳನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಮಹೇಶ ಡಂಬಳ, ಕೆಂಚವ್ವ ಪೂಜಾರ, ಉಮೇಶ ಡಂಬಳ, ಕಲ್ಲೇಶ ವಕೀಲರು, ಶಕುಂತಲಾ ಅಂಗಡಿ, ಕಿರಣ ಅಂಗಡಿ, ಜ್ಯೋತಿ ಮಾಲಿಪಾಟೀಲ, ಶಿಲ್ಪಾ, ಜುನಾಬೀ, ಕೆಎಚ್‌ಪಿಟಿಯ ಸಮುದಾಯ ಸಂಘಟಕರಾದ ಯಲ್ಲಪ್ಪ ಮೆಣೇಗಾರ, ಸುಷ್ಮಾ ಸಂಗರಡ್ಡಿ ಇದ್ದರು.