

ಮುಂಡರಗಿ: ತಂದೆ-ತಾಯಿ, ಶಿಕ್ಷಕರು ಹಾಗೂ ಸೈನಿಕರ ಋಣ ತೀರಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.
ಪಟ್ಟಣದ ಲಿಂಗರಾಜ ಸಮುದಾಯ ಭವನದಲ್ಲಿ ಕಸಾಪ ತಾಲೂಕು ಘಟಕ, ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಮತ್ತು ತ್ಯಾಗವೀರ ಸಿರಸಂಗಿ ಲಿಂಗರಾಜ ಸೇವಾಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಜರುಗಿದ ಮಾತೋಶ್ರೀ ಸಾವಿತ್ರಮ್ಮ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ನಿಮಿತ್ತ ಮುಂಡರಗಿ-ಒಂದು ಪಕ್ಷಿ ನೋಟ ಗ್ರಂಥ ಬಿಡುಗಡೆ ಹಾಗೂ ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿ ನಮ್ಮ ಮೊದಲ ಗುರುವಾಗಿದ್ದು, ನಾವೆಲ್ಲರು ಹೆತ್ತವರನ್ನು ಪ್ರೀತಿ ಹಾಗೂ ಗೌರವದಿಂದ ನೋಡಿಕೊಳ್ಳಬೇಕು. ತಂದೆ, ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದು ಬೇಸರದ ಸಂಗತಿ ಎಂದರು.
ಗ್ರಂಥ ಬಿಡುಗಡೆಗೊಳಿಸಿದ ಬ್ರಿಗೇಡಿಯರ್ ಸುಧೀಂದ್ರ ಇಟ್ನಾಳ ಮಾತನಾಡಿ, ಪ್ರಜೆಗಳೆಲ್ಲ ಒಳ್ಳೆಯವರಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಡಿಡಿಪಿಐ ಎಂ.ಎ. ರಡ್ಡೇರ ಮಾತನಾಡಿ, ಮನುಷ್ಯ ಮಾನವೀಯ ಮೌಲ್ಯಯುತ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಪರಿಸರಕ್ಕೆ ಹೆಚ್ಚಿದ ಆದ್ಯತೆ ನೀಡಿ ಗಿಡಮರಗಳನ್ನು ಹೆಚ್ಚೆಚ್ಚು ಬೆಳೆಸಬೇಕು. ಶಿಕ್ಷಣವಂತರಾಗಿ ಸುಂದರ ಜೀವನ ಕಂಡುಕೊಳ್ಳಬೇಕು ಎಂದರು.
ಲೋಕಾಯುಕ್ತ ನಿವೃತ್ತ ಡಿವೈಎಸ್ಪಿ ಎಸ್.ಎಸ್.ರೋಣದ ಟ್ರಸ್ಟ್ ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷ ಪ್ರೊ.ಸಿ.ಡಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾದ್ಯಾಪಕ ಕೆ.ಎಸ್. ಕೌಜಲಗಿ ಗ್ರಂಥ ಪರಿಚಯ ಮಾಡಿದರು. ವಿಜ್ಞಾನ ಶಿಕ್ಷಕ ಎಂ.ಎಚ್. ಸವದತ್ತಿ ಅವರಿಗೆ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗ್ರಂಥ ಲೇಖಕರನ್ನು ಸನ್ಮಾನಿಸಲಾಯಿತು.
ಬಿಇಒ ಗಂಗಾಧರ ಅಣ್ಣಿಗೇರಿ, ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸೀತಾ ಬಸಾಪುರ ಇದ್ದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಆರ್.ಎಲ್. ಪೊಲೀಸಪಾಟೀಲ ಪ್ರಾಸ್ತವಿಕವಾಗಿ ಮಾತನಾಡಿದರು. ನಿವೃತ್ತ ಉಪನ್ಯಾಸಕ ಎಸ್.ಆರ್. ಬಸಾಪುರ ಸ್ವಾಗತಿಸಿದರು. ಶಿಕ್ಷಕ ಎಸ್.ಆರ್.ರಿತ್ತಿ ಕಾರ್ಯಕ್ರಮ ನಿರೂಪಿಸಿದರು.