ಪೌರ ಕಾರ್ಮಿಕರ ಸೇವೆ ಗೌರವಿಸಿ

15 KRN-10
ಕೆ.ಆರ್.ನಗರದ ಸಂಗೊಳ್ಳಿರಾಯಣ್ಣ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಿ.ರವಿಶಂಕರ್ ಪೌರಕಾರ್ಮಿಕರನ್ನು ಸನ್ಮಾನಿಸಿದರು. ಬಿ.ವಿ.ವೆಂಕಟೇಶ್, ಮಿಕ್ಸರ್‌ಶಂಕರ್, ಕೆ.ಪಿ.ಪ್ರಭುಶಂಕರ್, ಕೋಳಿಪ್ರಕಾಶ್, ಕೆ.ಜಿ.ಸುಬ್ರಹ್ಮಣ್ಯ, ಕೆ.ಎಲ್.ಜಗದೀಶ್, ಉಮೇಶ್, ನಟರಾಜು, ಸಿದ್ದೀಕ್, ಶಿವುನಾಯಕ್ ಇನ್ನಿತರರು ಇದ್ದರು.
Published on

ಕೆ.ಆರ್.ನಗರ: ಸ್ವಚ್ಛತೆ ಮೂಲಕ ದೇಶದ ಶುಚಿತ್ವಗೊಳಿಸುತ್ತಿರುವ ರಾಷ್ಟ್ರಪಿತ ಮಹಾತ್ಮಗಾಂಧಿ ಕಂಡಿದ್ದ ಕನಸನ್ನು ನನಸು ಮಾಡುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಸಂಗೊಳ್ಳಿರಾಯಣ್ಣ ಸಮುದಾಯ ಭವನದಲ್ಲಿ ಮಂಗಳವಾರ ಪುರಸಭೆ ವತಿಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಟ್ಟಣದ ಕಸವನ್ನು ಸ್ವಚ್ಛಮಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುತ್ತಿರುವ ಅವರು ನಮ್ಮೆಲ್ಲರ ಹೆಮ್ಮೆ. ಪಟ್ಟಣಕ್ಕೆ ಸತತವಾಗಿ ಮೂರು ಬಾರಿ ಸ್ವಚ್ಛ ನಗರಿ ಪ್ರಶಸ್ತಿ ಬರಲು ಪೌರ ಕಾರ್ಮಿಕರ ಶ್ರಮವೇ ಕಾರಣ. ವರ್ಷದ 365 ದಿನಗಳು ಕೂಡ ತಾವು ಮಾತ್ರ ಕೊಳಕು ಬಟ್ಟೆ ಧರಿಸಿ ನಮ್ಮೆಲ್ಲರನ್ನು ಶುಭ್ರವಾಗಿರಿಸುವ ಪೌರ ಕಾರ್ಮಿಕರಿಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಿದರು.

ನಮ್ಮ ಸರ್ಕಾರ ಪೌರಕಾರ್ಮಿಕರಿಗಾಗಿ ಸಾಕಷ್ಟು ಅನುಕೂಲ ಮಾಡಿದೆ. ಸಫಾಯಿ ಕರ್ಮಚಾರಿ ನಿಗಮ ಆರಂಭಿಸಿ ವಾರ್ಷಿಕ 50 ಕೋಟಿ ಅನುದಾನ ನೀಡಿದೆ. ಪೌರಕಾರ್ಮಿಕರಿಗೆ ವಿದೇಶಿ ಪ್ರವಾಸ ಭಾಗ್ಯ, ಬೆಳಗಿನ ಉಪಾಹಾರ, ಯೋಜನೆ, ಗೃಹಭಾಗ್ಯ, ಸಂಕಷ್ಟ ಭತ್ಯೆ, ಇಎಫ್, ಪಿಎಫ್ ಜತೆಗೆ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಬೇಕೆಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಪೌರಕಾರ್ಮಿಕರು ಇದೇ ವೃತ್ತಿಗೆ ಅಂಟಿಕೊಳ್ಳದೇ ತಮ್ಮ ಆರೋಗ್ಯದ ಕಡೆಗೂ ಸಹ ಕಾಳಜಿ ವಹಿಸಿ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಮಾಡಿ ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಇರುವುದರಿಂದ ಶಿಶುಗಳಿಗೆ ಶಬ್ಧ ಮಾಲಿನ್ಯದಿಂದ ತೊಂದರೆಯಾಗಬಾರದೆಂಬ ಉದ್ದೇಶದಿಂದ ಪುರಸಭೆ ವೃತ್ತದಲ್ಲಿ ಯಾರೂ ಪಟಾಕಿ ಸಿಡಿಸದಂತೆ ಹಾಗೂ ವಾಹನಗಳು ಜೋರಾಗಿ ಆರನ್ ಮಾಡದಂತೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಕಾರ್ಯಕ್ರಮ ಉದ್ದೇಶಿಸಿ ಪುರಸಭಾ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಸದಸ್ಯರಾದ ಮಿಕ್ಸರ್‌ಶಂಕರ್, ಕೆ.ಪಿ.ಪ್ರಭುಶಂಕರ್ ಮಾತನಾಡಿದರು. ಪುರಸಭಾ ಸದಸ್ಯರಾದ ಕೋಳಿಪ್ರಕಾಶ್, ಕೆ.ಜಿ.ಸುಬ್ರಹ್ಮಣ್ಯ, ಕೆ.ಎಲ್.ಜಗದೀಶ್, ಉಮೇಶ್, ನಟರಾಜು, ಸಿದ್ದೀಕ್, ಶಿವುನಾಯಕ್, ಶಂಕರಸ್ವಾಮಿ, ಜಾವೀದ್‌ಪಾಷಾ, ಮಂಜುಳಾ ಚಿಕ್ಕವೀರು, ವಸಂತಮ್ಮ, ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು, ಜಿಲ್ಲಾ ಸಫಾಯಿ ಕರ್ಮಾಚಾರಿ ಮೇಲ್ವಿಚಾರಣಾ ಸಮಿತಿ ಸದಸ್ಯರಾದ ಮಂಜಪ್ಪ ಬಸವನಗುಡಿ, ದಿನೇಶ್, ಮುಖಂಡರಾದ ಆದರ್ಶ, ನವೀದ್, ಪುಟ್ಡರಾಜು, ವೃಷಬೇಂದ್ರ, ಪುರಸಭಾ ವ್ಯವಸ್ಥಾಪಕಿ ಸುಧಾರಾಣಿ, ಕಂದಾಯ ಅಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಕರಾದ ಎಚ್.ಎಸ್.ಲೋಕೇಶ್, ಎಸ್.ಪಿ.ರಾಜೇಂದ್ರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net