

ಬ್ಯಾಡಗಿ: ಸರ್ಕಾರಿ ನೌಕರರು ಪ್ರಾಮಾಣಿಕತೆ, ಸಹಕಾರ ಭಾವ, ತಾಳ್ಮೆಯೊಂದಿಗೆ ಕಾರ್ಯನಿರ್ವಹಿಸಿದಾಗ ವೃತ್ತಿ ಜೀವನ ಸಂತಸದಿಂದ ಕಳೆಯಲು ಸಾಧ್ಯ ಎಂದು ತಹಸೀಲ್ದಾರ್ ಪಿರೋಜ್ ಷಾ ಸೋಮನಕಟ್ಟಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಆಯೋಜಿಸಿದ್ದ ತಮ್ಮ ಬೀಳ್ಕೊಡುಗೆ ಹಾಗೂ ನೂತನ ತಹಸೀಲ್ದಾರ್ ಚಂದ್ರಶೇಖರ ನಾಯಕ ಅವರ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಅತಿವೃಷ್ಟಿ ಮನೆ, ಬೆಳೆ ಹಾನಿ ಪರಿಹಾರ ವಿತರಣೆ ಸೇರಿದಂತೆ ಸರ್ಕಾರದ ಹಲವು ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿದ್ದವು. ಗ್ರಾಮ ಆಡಳಿತಾಧಿಕಾರಿಗಳು, ಕಚೇರಿ ಸಿಬ್ಬಂದಿ, ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ಮುಖ್ಯಸ್ಥರು, ಪಿಡಿಒ, ಗ್ರಾಮಸಹಾಯಕರು ಸೇರಿದಂತೆ ಹಲವು ಸಿಬ್ಬಂದಿ ಕೈಜೋಡಿಸಿದ ಪರಿಣಾಮ ಆಡಳಿತಾತ್ಮಕವಾಗಿ ಎದುರಾದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿದೆ ಎಂದರು.
ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಗೌರವಿಸಿ, ಸಮಸ್ಯೆಗಳನ್ನು ಆಲಿಸಬೇಕು. ಅವರಿಂದ ಅಭಿಪ್ರಾಯ ಕೇಳಿದಾಗ ಹಲವು ಸಮಸ್ಯೆಗಳಿಗೆ ಅವರಿಂದಲೇ ಅರ್ಧ ಪರಿಹಾರ ಸಿಗಲಿದೆ. ನೂತನ ತಹಸೀಲ್ದಾರರು ಸಾಕಷ್ಟು ಅನುಭವಿಗಳಿದ್ದಾರೆ. ನನಗೆ ನೀಡಿದಂತೆ ಅವರಿಗೂ ಸಹಕಾರ ನೀಡಬೇಕು ಎಂದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಾಲತೇಶ ಕಂಬಳಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಶಿರಸ್ತೆದಾರ ಮಂಜುಳಾ ನಾಯಕ, ನಾಗರತ್ನಾ ಕಾಳೇರ, ಆರ್.ಸಿ. ದ್ಯಾಮಗೌಡ್ರ, ಎಸ್.ಎನ್. ಮಲ್ಲಾಡದ, ಆರ್.ಎ. ಕುಲಕರ್ಣಿ, ಭೂಮಾಪನ ಇಲಾಖೆ ನಿರ್ದೇಶಕ ನಜೀರ ಅಹ್ಮದ್ ಎಸ್., ಬಿಇಒ ಎಸ್.ಜಿ. ಕೋಟಿ, ಮೋಹನಕುಮಾರ ಎಚ್., ನಾಗರಾಜ ಗೂಳೇರ, ಬಿ.ಎನ್. ಕವಾಸ, ಶಬ್ಬೀರ್ ಬಾಗವಾಡಿ, ರಂಗಪ್ಪ ಗೌಡ್ರ, ಕಂದಾಯ ಇಲಾಖೆ ನೌಕರರ ತಾಲೂಕಾಧ್ಯಕ್ಷೆ ಪ್ರಭಾವತಿ ಬಡಿಗೇರ ಇತರರಿದ್ದರು.