

ಮಡಿಕೇರಿ: ಜಾಗತಿಕವಾಗಿ ಕರೊನಾ ಬಳಿಕ ೮ ಜನರಲ್ಲಿ ಒಬ್ಬರಿಗೆ ಮಾನಸಿಕ ಅಸ್ವಸ್ಥತೆ ಕಂಡುಬರುತ್ತಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಎನ್.ಆನಂದ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಭೋದಕ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನಸಿಕ ಆರೋಗ್ಯ ಮನುಷ್ಯನಿಗೆ ತುಂಬಾ ಮುಖ್ಯ. ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸವಾದಲ್ಲಿ ಸಮಾಜದ ಸ್ಥಿತಿಗತಿಗಳಲ್ಲಿ ಏರುಪೇರು ಉಂಟಾಗುತ್ತದೆ. ಸಮಾಜದ ಒಳಿತಿಗೆ ಮಾನಸಿಕ ಖಾಯಿಲೆಗೆ ತಕ್ಕಂತೆ ಔಷಧಿ ಹಾಗೂ ಸಲಹೆ-ಸೂಚನೆ ದೊರಕಬೇಕು. ಮಾನಸಿಕ ರೋಗ ಲಕ್ಷಣ ಇರುವಂತಹ ವ್ಯಕ್ತಿಗಳನ್ನು ಪತ್ತೆಹಚ್ಚಿ ಧೈರ್ಯ ತುಂಬುವ ಹಾಗೂ ಔಷಧೋಪಚಾರಗಳಿಗೆ ಒಪ್ಪಿಸುವ ಕಾರ್ಯಗಳು ತುರ್ತಾಗಿ ನಡೆಯಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಮಾತನಾಡಿ, ವಿಶ್ವ ಮಾನಸಿಕ ಆರೋಗ್ಯ ಕಾರ್ಯಕ್ರಮ ೧೯೯೨ರಲ್ಲಿ ಆಫ್ರಿಕಾದಲ್ಲಿ ಆರಂಭವಾಯಿತು. ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಇದ್ದು, ಮಾನಸಿಕ ಅಸ್ವಸ್ಥ ವ್ಯಕ್ತಿಗೂ ಅವರದೇ ಆದ ಘನತೆ, ಗೌರವದಿಂದ ಬದುಕುವ ಹಕ್ಕಿದೆ. ಮಾನಸಿಕ ಅಸ್ವಸ್ಥರನ್ನು ತಾರತಮ್ಯ ಮಾಡುವಂತಿಲ್ಲ. ಕಾನೂನಿನ ಅಡಿಯಲ್ಲಿ ಸರ್ವರೂ ಸಮಾನವರು. ಆ ನಿಟ್ಟಿನಲ್ಲಿ ಮುಖ್ಯವಾಹಿನಿಗೆ ತರುವುದು ಅತೀ ಮುಖ್ಯವಾಗಿದೆ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲ ವಿಶಾಲ್ ಕುಮಾರ್ ಮಾತನಾಡಿ, ಮಾನಸಿಕ ಆರೋಗ್ಯ ಸಮಸ್ಯೆ ಮುಜುಗರ ಪಡುವಂತಹ ಸಮಸ್ಯೆ ಅಲ್ಲ. ಮಾನಸಿಕ ಆರೋಗ್ಯದಲ್ಲಿ ವ್ಯತ್ಯಯವಾದರೆ ಗೌಪ್ಯವಾಗಿಟ್ಟುಕೊಂಡಷ್ಟ್ಟು ಸಮಸ್ಯೆ ಉಲ್ಬಣಿಸುತ್ತದೆ. ಸಮಸ್ಯೆಯನ್ನು ಹೋಗಲಾಡಿಸಲು ಹಲವಾರು ಮಾರ್ಗೋಪಾಯಗಳನ್ನು ಮನೋವೈದ್ಯರು ನೀಡುತ್ತಾರೆ. ಮಾನಸಿಕ ಖಿನ್ನತೆಗೆ ಒಳಗಾದವರು ವೈದ್ಯರ ಬಳಿ ಆಪ್ತ ಸಮಾಲೋಚನೆ ನಡೆಸಲು ಅವಕಾಶವಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಡಿವೈಎಸ್‌ಪಿ ಜಗದೀಶ್ ಮಾತನಾಡಿ, ಮಾನಸಿಕ ಅಸ್ವಸ್ಥರ ಸಮಸ್ಯೆಗಳನ್ನು ನಿವಾರಿಸಲು ಪೊಲೀಸ್ ಹಾಗೂ ಕಾನೂನು ವಿಭಾಗಕ್ಕೆ ಹೆಚ್ಚಿನ ಮಾಹಿತಿಯ ಅವಶ್ಯಕತೆ ಇದೆ. ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಗಳ ಅಪರಾಧ ಪರಿಗಣಿಸಿ ಪ್ರತ್ಯೇಕವಾಗಿ ಚಿಕಿತ್ಸೆ ಕೊಡಿಸಬೇಕಾಗುವುದು. ಮಾನಸಿಕ ಆರೋಗ್ಯ ಮನುಷ್ಯನ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡೇವಿನ್ ಲಿನೇಕರ್ ಕರ್ಕಡ ಮಾತನಾಡಿ ೨೦೧೬ ರಿಂದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಮಾನಸಿಕ ಆರೋಗ್ಯದ ಘಟಕ ಆರಂಭಿಸಲಾಗಿದೆ ಎಂದ ಅವರು, ಖಿನ್ನತೆ, ಆತಂಕ, ಮನೋಬಲ ಸದೃಢವಾಗಿಲ್ಲದೆ ಇರುವ ವ್ಯಕ್ತಿಗಳು ಆತ್ಮಹತ್ಯೆಗೆ ಒಳಗಾಗುವುದನ್ನು ಗಮನಿಸಬಹುದು. ಇಂತಹ ಮಾನಸಿಕ ಖಿನ್ನತೆಯಿಂದ ಹೊರಬರಲು ಜೀವನ ಶೈಲಿ, ಊಟೋಪಚಾರ, ವ್ಯಾಯಾಮದ ಅಗತ್ಯತೆ ಬಹಳ ಮುಖ್ಯವಾಗಿದೆ ಎಂದರು.
ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ನಿರ್ಮಿಸಲಾಗಿರುವ (ಉಚಿತ ಸಹಾಯವಾಣಿ-೧೪೪೧೬) ವಿಭಾಗಕ್ಕೆ ಕರೆ ಮಾಡಿ ಆಪ್ತ ಸಮಾಲೋಚನೆ ನಡೆಸಬಹುದು. ಮಾದಕ ವಸ್ತುವಿನ ಅವಲಂಬನೆ, ನಿದ್ರಾಹೀನತೆ, ಹೆಚ್ಚು ಆಹಾರ ಸೇವನೆ ಮುಂತಾದ ಪ್ರತಿಯೊಂದು ಸಮಸ್ಯೆಗೆ ವೈದ್ಯರು ಪರಿಹಾರ ನೀಡುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಗ್ರಾಮ ಆರೋಗ್ಯ ಕಾರ್ಯಕ್ರಮದ ಸಂಯೋಜಕಿ ಆರ್.ಬ್ರೋಹಿಶಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಕೆ.ಬಿ.ಕಾರ್ಯಪ್ಪ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿಗಳು, ವೈದ್ಯಾಧಿಕಾರಿಗಳು, ನಸಿರ್ಂಗ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಮತ್ತಿತರರು ಇದ್ದರು.