ಗುರು ಹಿರಿಯರಿಗೆ ಗೌರವ ನೀಡಿ

FotoJet (1)
Published on

ತುರುವೇಕೆರೆ : ಗುರುಹಿರಿಯರನ್ನು ಗೌರವಿಸುವ ಪರಿಪಾಠ ಬೆಳೆಸಿಕೊಂಡರೆ ಜೀವನ ಸಾರ್ಥಕತೆ ಪಡೆಯುತ್ತದೆ ಎಂದು ಸಾಹಿತಿ ಪ್ರೊ.ಕೃಷ್ಣಮೂರ್ತಿ ಬೆಳಗೆರೆ ತಿಳಿಸಿದರು.

ತಾಲೂಕಿನ ಕೊಂಡಜ್ಜಿ ಗ್ರಾಮದ ಶ್ರೀ ವಿದ್ಯಾನಿಧಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಇಪ್ಪತ್ತಕ್ಕೂ ಹೆಚ್ಚು ಗುರುಗಳಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಹೇಗೆ ವರ್ತಿಸುತ್ತೇವೆಯೋ, ಹಾಗೆಯೇ ನಮ್ಮ ಮಕ್ಕಳೂ ಸಹ ಅದನ್ನು ಅನುಕರಿಸುತ್ತಾರೆ. ನಾವು ಗುರು ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ರೂಢಿಸಿಕೊಂಡರೆ ನಮ್ಮ ಮಕ್ಕಳೂ ಸಹ ಅದನ್ನೇ ಅನುಕರಿಸುತ್ತವೆ ಎಂದರು.

ಮುಖಂಡ ಕೊಂಡಜ್ಜಿ ವಿಶ್ವನಾಥ್​ ಮಾತನಾಡಿ, ಇದೊಂದು ಆದರ್ಶಮಯ ಕಾರ್ಯಕ್ರಮ. ಹಿರಿಯ ವಿದ್ಯಾರ್ಥಿಗಳು ಮಾಡಿರುವ ಈ ಕಾರ್ಯಕ್ರಮದಿಂದ ನಮ್ಮ ಗ್ರಾಮಕ್ಕೆ ಗೌರವ ಹೆಚ್ಚಾಗಿದೆ. ಗುರುವಂದನಾ ಕಾರ್ಯಕ್ರಮವನ್ನು ಗ್ರಾಮಸ್ಥರೆಲ್ಲ ಊರಹಬ್ಬದಂತೆ ಆಚರಿಸಿ ಸಂಭ್ರಮಿಸಿದ್ದಾರೆಂದು ಮುಕ್ತಕಂಠದಿಂದ ಪ್ರಸಂಶಿಸಿದರು.

ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಕೊಂಡಜ್ಜಿ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಗ್ರಾಮಕ್ಕೆ ಗುರುಗಳು ಬರುತ್ತಲೇ ಎಲ್ಲ ವಿದ್ಯಾರ್ಥಿಗಳು ಕಾಲಿಗೆರೆದು ಗುರುಗಳ ಆಶೀರ್ವಾದ ಪಡೆದರು. ಎಲ್ಲ ಗುರುಗಳನ್ನು ಸುವರ್ಣ ರಥದ ಮೇಲೆ ಕುಳ್ಳಿರಿಸಿ ಜಾನಪದ ಕಲಾ, ಮೇಳ, ವೀರಗಾಸೆ ಕುಣಿತ, ಸಿಡಿಮದ್ದಿನ ಸಡಗರದೊಂದಿಗೆ ಭವ್ಯ ಮೆರವಣಿಗೆ ನಡೆಸಿದರು.

ಗುರುಗಳಾದ ವೀರಪ್ಪಯ್ಯ, ಶಿವಬಸಪ್ಪ, ಕುಮಾರಸ್ವಾಮಿ, ಧರ್ಮಪ್ಪ, ಕಾಳೇಗೌಡರ್​, ಮೋಕ್ಷಾ, ವೇದಾವತಿ, ಜಯರಾಮ್​, ಚಂದ್ರಪ್ಪ, ಸದಾಶಿವಯ್ಯ, ರಾಜಶೇಖರ್​, ಶಿವಶಂಕರಪ್ಪ, ನರಸಿಂಹರಾಜು, ಜಯ್ಯಣ್ಣ, ತಿಮ್ಮಯ್ಯ, ಶಿವಣ್ಣ, ಕೆ.ಬಿ.ರಾಜಣ್ಣ, ರಾಮೇಗೌಡ ಸೇರಿದಂತೆ ಶಾಲೆಯಲ್ಲಿ ಸೇವೆಸಲ್ಲಿಸಿದ್ದ ಶಾಲಾ ಸಿಬ್ಬಂದಿಯನ್ನೂ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net