ಹಿರಿಯ ನಾಗರಿಕರನ್ನು ಗೌರವಿಸಿ

21blrp2
Published on


ಬೇಲೂರು : ಹಿರಿಯ ನಾಗರಿಕರು ಸಮಾಜಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದ್ದು, ಅವರನ್ನು ಸ್ಮರಿಸಿ ಗೌರವಿಸುವ ಮೂಲಕ ಅವರ ಸಹಭಾಗಿತ್ವದಲ್ಲಿ ಮುಂದೆ ಸಾಗುವುದು ಮುಖ್ಯವಾಗಿದೆ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಚಂದ್ರಮೌಳಿ ಹೇಳಿದರು.

ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಪಟ್ಟಣದ ಕಾವೇರಿ ಕ್ಲಿನಿಕ್ ಆವರಣ ಲಯನ್ಸ್ ಸಂಸ್ಥೆಯಿಂದ ಇತ್ತೀಚೆಗೆ ಆಯೋಜಿಸಿದ್ದ ಮಧುಮೇಹ ಹಾಗೂ ರಕ್ತದೊತ್ತಡ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯದಿಂದ ಮುಪ್ಪಿನವರೆಗೂ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ಕಾಣುತ್ತೇವೆ. ಹಿರಿಯರು ತಮ್ಮ ಜೀವನದ ಅನುಭವವನ್ನು ಮುಂದಿನ ಪೀಳಿಗೆಯೊಂದಿಗೆ ಹಂಚಿಕೊಳ್ಳಬೇಕು. ಆದರೆ ಇಂದಿನ ಯುವ ಜನಾಂಗ ತಮ್ಮ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಮನೆಯಲ್ಲಿ ಹಿರಿಯರಿಲ್ಲದೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಹಿರಿಯರು ತಮ್ಮ ಆರೋಗ್ಯ ಕಾಪಾಡಿ ಕೊಳ್ಳುವತ್ತ ಗಮನ ಹರಿಸಬೇಕು. ಹಿರಿಯರು ನಿಯಮಿತ ವೈದ್ಯಕೀಯ ತಪಾಸಣೆ, ಸಮತೋಲಿತ ಆಹಾರ ಸೇವಿಸುವುದು ಮುಖ್ಯ ಎಂದರು.

ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಪೂವಯ್ಯ ಮಾತನಾಡಿ, ಹಿರಿಯ ನಾಗರಿಕರು ಒಂದು ತಲೆಮಾರಿನವರೆಗೂ ಕುಟುಂಬಗಳ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಕಾರಣರಾದವರು. ಅವರಲ್ಲಿ ಈಗ ಶಕ್ತಿ ಕುಂಠಿತಗೊಂಡರೂ ಅವರು ಯಾವತ್ತಿದ್ದರೂ ದೇಶದ ಆಸ್ತಿ. ಅವರಿಗಾಗಿ ಒಂದು ದಿನವನ್ನು ಮುಡಿಪಾಗಿಟ್ಟು ಆಚರಿಸುವಂತಾಗಬೇಕು. ಇಂದಿನ ಆಧುನಿಕ ಜೀವನದಲ್ಲಿ ಹಿರಿಯ ಜೀವಗಳೇ ಹೆಚ್ಚು ಮರುಗುವಂತ್ತಾಗಿದೆ. ಆದ್ದರಿಂದ ಯುವ ಜನತೆ ನಮ್ಮ ಜೀವನಕ್ಕೆ ಬೆಳಕು ನೀಡಿದ ಹಿರಿಯ ಜೀವಗಳನ್ನು ಸಂತೋಷವಾಗಿಡುವತ್ತ ಮುಂದಾಗಬೇಕಿದೆ ಎಂದರು.

ಇದೇ ಸಂದರ್ಭ 50 ಹಿರಿಯ ನಾಗರಿಕರಿಗೆ ಉಚಿತವಾಗಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಮಾಡಲಾಯಿತು. ಲಯನ್ಸ್ ಸಂಸ್ಥೆ ವೈ.ಬಿ.ಸುರೇಶ್, ಪುಟ್ಟಸ್ವಾಮಿ, ಸಂತೋಷ್, ಆದರ್ಶ, ವಿನೋದ, ಪ್ರಭಾಕರ್, ಸ್ವರ್ಣ ಶ್ರೀನಿವಾಸ, ನೌಷದ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net