ಕನ್ನಡ ಭಾಷೆಯನ್ನು ತಾಯಿಯಂತೆ ಗೌರವಿಸಿ

20 YLP 1
Published on

ಯಲ್ಲಾಪುರ: ಶಿಕ್ಷಣದೊಂದಿಗೆ ಸಂಸ್ಕಾರ ಮುಖ್ಯ. ಶಾಲೆಯಲ್ಲಿ ನೀಡುವ ಸಂಸ್ಕಾರ ನಮ್ಮ ಆಸ್ತಿಯಾಗಿರುತ್ತದೆ ಎಂದು ತಾಲೂಕು ಕಸಾಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಹೇಳಿದರು.

ತಾಲೂಕಿನ ಭರತನಹಳ್ಳಿಯ ಪ್ರಗತಿ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ದಿ. ದಿನಕರ ದೇಸಾಯಿ ಅವರ ಜನ್ಮದಿನದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಚುಟುಕು ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಮಾತೃಭಾಷೆಯನ್ನು ಮನೆಯಲ್ಲಿ ಮಾತನಾಡಿದರೂ, ಕನ್ನಡ ಭಾಷೆಯನ್ನೂ ತಾಯಿಯಂತೆ ಗೌರವಿಸಬೇಕು ಎಂದರು.

ಸಾಹಿತಿ ಗ.ರಾ. ಭಟ್ಟ ಮಾತನಾಡಿ, ದಿನಕರ ದೇಸಾಯಿ ಅವರು ತಮ್ಮ ಚುಟುಕಿನಿಂದಲೇ ಸಮಾಜದ ಎಲ್ಲ ಜನರನ್ನೂ ಆಕರ್ಷಿಸಿದರು. ಜೀವನದಲ್ಲಿ ಎಂದೂ ಅಹಂಕಾರವಿರಬಾರದು. ಅಹಂಕಾರಿಯನ್ನು ಸಮಾಜ ತಿರಸ್ಕರಿಸಿದರೆ ನಿರಹಂಕಾರಿಯನ್ನು ಗೌರವಿಸುತ್ತದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತರಾದರೆ ಗೌರವಯುತವಾಗಿ ಬೆಳೆಯಲು ಸಾಧ್ಯ ಎಂದರು. ಮುಖ್ಯಾಧ್ಯಾಪಕ ವಿನಾಯಕ ಹೆಗಡೆ ಮಾತನಾಡಿದರು. ಚುಟುಕು ರಚನಾ ಸ್ಪರ್ಧೆಯಲ್ಲಿ ಕಾರ್ತಿಕ ಪೂಜಾರಿ ಪ್ರಥಮ, ಅಪೇಕ್ಷಾ ಶೇಟ್ ದ್ವಿತೀಯ, ಮಧುರಾ ನಾಯ್ಕ ತೃತೀಯ ಬಹುಮಾನ ಪಡೆದರು.

ಶಿಕ್ಷಕ ಚಂದ್ರಪ್ಪ ವಂಟಮುರಿ ಸ್ವಾಗತಿಸಿದರು. ಧನ್ಯಾ ಹೆಗಡೆ ದಿನಕರ ದೇಸಾಯಿ ಅವರ ಬದುಕು ಬರಹ ಕುರಿತು ಮಾತನಾಡಿದರು. ಆದಿತ್ಯ ಶಂಕರ ನಿರ್ವಹಿಸಿದರು. ಪ್ರಕಾಶ ಭಟ್ಟ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net