

ಮೈಸೂರು: ಗುರುವಿನಿಂದ ಶಿಷ್ಯನಿಗೆ, ಶಿಷ್ಯನಿಂದ ಗುರುವಿಗೆ ಸನ್ಮಾನ…!
ಇಂತಹ ಒಂದು ಅಪರೂಪದ ಕ್ಷಣಕ್ಕೆ ಗುರುವಾರ ಬೆಳಗ್ಗೆ ವಿಜಯನಗರ ಎರಡನೇ ಹಂತದಲ್ಲಿರುವ ಅಂತಾರಾಷ್ಟ್ರೀಯ ಅಥ್ಲೆಟ್ ಎಂ. ಯೋಗೇಂದ್ರ ಅವರ ನಿವಾಸ ಸಾಕ್ಷಿಯಾಯಿತು.
ಎಸ್. ಬಾಲಾಜಿ ಅವರು ಶಿಕ್ಷಣ ಇಲಾಖೆಯಲ್ಲಿ ಒಟ್ಟು 37 ವರ್ಷಗಳು ಸೇವೆ ಸಲ್ಲಿಸಿದ್ದಾರೆ. ಈ ಪೆಕಿ 34 ವರ್ಷ ಯಾದವಗಿರಿಯ ಶ್ರೀರಾಮಕೃಷ್ಣ ವಿದ್ಯಾಶಾಲೆಯ ಸೇವೆ. ಅದರಲ್ಲೂ ಸತತ 25 ವರ್ಷಗಳು ಪ್ರಿನ್ಸಿಪಾಲರಾಗಿದ್ದು, ಇತ್ತೀಚೆಗೆ ನಿವೃತ್ತರಾದರು.
ಯೋಗೇಂದ್ರ ಅವರ ಪುತ್ರ ಎಂ. ಭರತ್ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಪಿಯುಸಿ ಓದಿದವರು. ಎರಡು ಪರೀಕ್ಷೆಗಳಲ್ಲೂ ಉನ್ನತ ಶ್ರೇಣಿಯಲ್ಲಿ ಪಾಸಾದವರು. ನಂತರ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ಮುಂದೆ ಭಾರತೀಯ ರಕ್ಷಣಾ ಅಕಾಡೆಮಿಯು ರಾಷ್ಟ್ರ ಮಟ್ಟದಲ್ಲಿ ನಡೆಸುವ ನಡೆಸುವ ಪರೀಕ್ಷೆಯಲ್ಲಿ ಅದರಲ್ಲೂ ಕಠಿಣವಾದ ದೆಹಿಕ ಪರೀಕ್ಷೆಯನ್ನು ಪಾಸು ಮಾಡಿ, ಅತ್ಯಂತ ಕಿರಿಯ ವಯಸ್ಸಿಗೆ ಭಾರತೀಯ ಸೇನೆಯ ಲೆಫ್ಟಿನೆಂಟ್ ಆಗಿ ಆಯ್ಕೆಯಾದವರು. ನಂತರ ಕ್ಯಾಪ್ಟನ್ ಆಗಿ ಬಡ್ತಿ ಪಡೆದು, ಅಂತಾರಾಷ್ಟ್ರೀಯ ಒಪ್ಪಂದದಂತೆ ಪ್ರಸ್ತುತ ಸೂಡಾನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 26 ವರ್ಷದ ಭರತ್‌ಗೆ ಮುಂದಿನ ವರ್ಷದ ವೇಳೆಗೆ ಮೇಜರ್ ಆಗಿ ಬಡ್ತಿ ಸಿಗಲಿದೆ.
ರಜೆಯ ಮೇಲೆ ಮೆಸೂರಿಗೆ ಬಂದಿರುವ ವಿಷಯ ತಿಳಿದು ಎಸ್. ಬಾಲಾಜಿ ಅವರು ಪತ್ನಿ ಶಶಿಕಲಾ ಅವರೊಂದಿಗೆ ಯೋಗೇಂದ್ರ ಅವರ ನಿವಾಸಕ್ಕೆ ಭೇಟಿ ನೀಡಿ, ಅಭಿನಂದಿಸಿದರು. ನಮ್ಮ ಶಾಲೆಯಲ್ಲಿ ಓದಿದ 15ಕ್ಕೂ ಹೆಚ್ಚು ಮಂದಿ ಐಎಎಸ್ ಅಧಿಕಾರಿಗಳಾಗಿದ್ದಾರೆ. ಆರು ಮಂದಿ ಕುಲಪತಿಗಳಾಗಿದ್ದಾರೆ. ಆದರೆ ಭರತ್ ಕಿರಿಯ ವಯಸ್ಸಿನಲ್ಲಿಯೇ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಹುದ್ದೆಗೆ ಏರಿರುವುದು ಸಂತಸ ತಂದಿದೆ. ಒಬ್ಬ ಗುರುವಿಗೆ ಇದಕ್ಕಿಂತ ಸಂತೋಷ ಇನ್ನೇನು ಬೇಕು? ಎಂದು ಬಾಲಾಜಿ ಹರ್ಷ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಯಾಗಿ ಭರತ್ ಕೂಡ ಬಾಲಾಜಿ ದಂಪತಿಯನ್ನು ಅಭಿನಂದಿಸಿ , ಐದು ವರ್ಷಗಳ ಕಾಲ ನಮ್ಮನ್ನು ತಿದ್ದಿ- ತೀಡಿ ಈ ಮಟ್ಟಕ್ಕೆ ಬರಲು ಕಾರಣರಾಗಿದ್ದಾರೆ ಎಂದು ಫಲತಾಂಬೂಲ, ಸ್ಮರಣಿಕೆ ನೀಡಿ ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು.
ಈ ಅಪರೂಪದ ಕ್ಷಣಕ್ಕೆ ಭರತ್ ಅವರ ತಂದೆ ಎಂ. ಯೋಗೇಂದ್ರ, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಟಿ.ಆರ್. ಸತೀಶ್‌ಕುಮಾರ್, ತುಷಾರ್ ಸಾಕ್ಷಿಯಾದರು.