ಕಲಿಸಿದ ಗುರುಗಳಿಗೆ ಗೌರವ ನಮನ

NRD GURUVANDANE
Published on

ನರಗುಂದ: ಅಂದು ಅವರೆಲ್ಲರೂ ತುಂಟಾಟ ಆಡುತ್ತಿದ್ದ ಶಾಲಾ ಮಕ್ಕಳು. ಅದರಲ್ಲಿ ಕೆಲವರು ಓದಿನಲ್ಲಿ ಜಾಣರಿದ್ದರೆ, ಮತ್ತೆ ಕೆಲವರು ಕಲಿಕೆಯಲ್ಲಿ ಹಿಂದುಳಿದು ಮೇಷ್ಟ್ರ ಕಡೆ ಬೈಗುಳ, ಬಡಿತ ತಿಂದವರು. ಆದರೆ, ಇವತ್ತು ಅವರೆಲ್ಲ ಒಂದಿಲ್ಲೊಂದು ಹುದ್ದೆಯಲ್ಲಿದ್ದು, ಜೀವನದ ಜವಾಬ್ದಾರಿ ಹೊತ್ತವರಾಗಿದ್ದಾರೆ. ಕಲಿಸಿದ ಗುರುಗಳಿಗೆ ಗೌರವ ನಮನ ಸಲ್ಲಿಸುವ ನೆಪದಲ್ಲಿ 26 ವರ್ಷಗಳ ಬಳಿಕ ಇವರೆಲ್ಲ ಮತ್ತೆ ಒಂದೆಡೆಗೆ ಸೇರಿದ್ದರು. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಪಟ್ಟಣದ ಲಯನ್ಸ್ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಸಾಕ್ಷಿಯಾದರು.

1999ರಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿದ ವಿದ್ಯಾರ್ಥಿಗಳು ತಮಗೆ ತಿದ್ದಿ, ಬುದ್ಧಿ ಹೇಳಿದ ಶಿಕ್ಷಕರಿಗೆ ಗೌರವ ನಮನ ಸಲ್ಲಿಸುವ ಸಲುವಾಗಿ ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿದ್ದರು. ಉನ್ನತ ಹುದ್ದೆಗಳಲ್ಲಿದ್ದರೂ ಆಡಂಬರ ಮರೆತು ವಿಧೇಯ ಶಿಷ್ಯರಂತೆ ಶಾಲೆಯಲ್ಲಿ ಕಳೆದ ಹಳೆಯ ದಿನಗಳ ಮೆಲುಕು, ಸಹಪಾಠಿಗಳೊಂದಿಗಿನ ಹರಟೆ, ಕ್ಲಾಸ್ ರೂಂ ಸಂಸ್ಕೃತಿಯನ್ನು ಮರು ಸೃಷ್ಟಿಸಿಕೊಂಡು ಕಲಿಸಿದ ಗುರುವೃಂದದವರೊಂದಿಗೆ ಊಟ-ಉಪಾಹಾರ ಸೇವಿಸಿ ಆಟ-ಪಾಠಗಳನ್ನು ಕೇಳುವುದರ ಮೂಲಕ ಗುರುಗಳಿಗೆ ಗುರುವಂದನೆ ಅರ್ಪಿಸಿ ಮಹತ್ವದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯ ಜಿ.ಬಿ. ಹಿರೇಮಠ, ಪ್ರಾಚಾರ್ಯ ಎಸ್.ಜಿ. ಜಕ್ಕಲಿ ಮಾತನಾಡಿ, ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಬದುಕು ಹಾಗೂ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತದೆ. ಅಂತರ್ಜಾಲ ಸಹಾಯದಿಂದ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಹಳೆಯ ನೆನಪುಗಳ ರಿಂಗಣ, ಹೊಸತನ ಸ್ವೀಕಾರದ ಘಳಿಗೆ, ವಿದ್ಯಾರ್ಥಿಗಳ ಪುನರ್ ಮಿಲನಕ್ಕೆ ಸಾಕ್ಷಿಯಾಗಿದೆ. ಇಂತಹ ಕ್ಷಣಗಳು ಸುಂದರ ಬದುಕು ಕಟ್ಟಿಕೊಡುತ್ತದೆ ಎಂದರು.

ರವಿ ಕುಲಕರ್ಣಿ, ರಾಘವೇಂದ್ರ ಬೆಳಗಲಿ, ಈರಮ್ಮ ಹಸಬಿ ಮಾತನಾಡಿದರು. ಬದ್ರಿನಾಥ ಗುಡಿಸಾಗರ, ಡಾ.ರೂಪಾ ಪಾಟೀಲ, ಶಿವಾನಂದ ಗದ್ದನಕೇರಿ, ಬಸವರಾಜ ಕರಿಗೌಡ್ರ, ಚನ್ನಬಸಯ್ಯ ಹೊಳಿಮಠ, ಶರಣಪ್ಪ ಕಟಗಿ, ಡಾ. ಪುಷ್ಪಾ, ಡಾ, ಸುಷ್ಮಾ, ಚೇತನಾ ಕಂಠಿ, ಕನ್ನಿಕಾ ಹಂದ್ರಾಳ, ರಾಜಲಕ್ಷ್ಮೀ ಇಂಗಳಳ್ಳಿ, ಶ್ರೀದೇವಿ ಸಾಲೂಟಗಿಮಠ, ಶೀಲಾ ಉದ್ದಿ, ಸ್ಮೀತಾ ಬೋನಗೇರಿ, ಪವನ ಗುಡಿಸಾಗರ, ಕೃಷ್ಣಾ ಹಳಕಟ್ಟಿ, ವಿನಯ ಪಾಟೀಲ, ಮುರಿಗೇಶ ಕೋರಿ, ರವಿ ವಡ್ಡಿಗೇರಿ, ನವೀನ ಗೋವೇಶ್ವರ, ಫಾರೂಕ್ ಅಹ್ಮದ್ ಬಿದರಕುಂದಿ, ಅವಿನಾಶ ಚವಡಿ, ಸಂಜಯ ಆನೇಗುಂದಿ, ಬಸಯ್ಯ ಹಿರೇಮಠ, ದಾವಲಸಾಬ್ ನದಾಫ್, ಪ್ರವೀಣ ಜೈನ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net