

ಭಟ್ಕಳ, ಅನ್ನ, ನೀರು ಇಲ್ಲದೆ ದಿನ ಕಳೆಯಬಹುದು. ಆದರೆ, ಶ್ವಾಸ ಇಲ್ಲದೆ ಒಂದು ಕ್ಷಣವೂ ಕಳೆಯಲೂ ಆಗುವುದಿಲ್ಲ. ಮಾನವನ ಶರೀರ ನಡೆಯುವುದೆ ದೇವರು ನೀಡಿದ ಶ್ವಾಸದಿಂದ. ಆದ್ದರಿಂದ ಪ್ರತಿಕ್ಷಣ ದೇವರ ನಾಮಸ್ಮರಣೆ ಮಾಡಬೇಕು ಎಂದು ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ಹೊನ್ನಾವರ ತಾಲೂಕಿನ ಬಲ್ಕೂರಿನ ಕೊಡ್ಲಮನೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು. ಆಹಾರ, ನೀರು ಇಲ್ಲದೆ ಕಷ್ಟಪಟ್ಟು ನಾಲ್ಕೈದು ದಿನ ಕಳೆಯಬಹುದು. ಆದರೆ, ಶ್ವಾಸ ಇಲ್ಲದೆ ಬದುಕಲು ಒಂದು ಕ್ಷಣವೂ ಸಾಧ್ಯವಿಲ್ಲ. ಒಮ್ಮೆ ದೇವರು ನೀಡಿದ ಪ್ರಾಣ ಹಾರಿ ಹೋದ ಮೇಲೆ ಕೃತಕ ಶ್ವಾಸ ನೀಡಿದರು ಪ್ರಯೋಜನವಿಲ್ಲ. ಪ್ರಾಣ ಇದ್ದಾಗ ನಮ್ಮ ಶರೀರವನ್ನು ನಾವು ಸಿಂಗರಿಸಿಕೊಂಡು ಅತಿ ಹೆಚ್ಚು ಪ್ರೀತಿಸುತ್ತೇವೆ. ಹೆಸರಿನಿಂದ ಕರೆಯುವ ಮನುಷ್ಯರನ್ನು ಪ್ರಾಣ ಹೋದಮೇಲೆ ಕರೆಯುವುದೆ ಬೇರೆ ರೀತಿಯಲ್ಲಿ. ಪ್ರಾಣ ಇರುವವರೆಗೆ ಮಾತ್ರ ಈ ಶರೀರಕ್ಕೆ ಗೌರವ ಎಂದು ಅವರು ಹೇಳಿದರು.
ದೇವರೊಂದಿಗೆ ನಮಗೆ ಸಂಬಂಧ ಇದ್ದರೆ ಸಾಕು. ಯಾರೂ ನಮ್ಮ ಬಳಿ ಸುಳಿಯುವುದಿಲ್ಲ. ದೇವರ ಅರ್ಚನೆ, ಸಂಸ್ಮರಣೆ, ಧ್ಯಾನ, ಕೀರ್ತನೆ, ಕಥಾ ಶ್ರವಣ, ಶ್ರವಣ ನಡೆಯಬೇಕು. ಅನುದಿನ, ಪ್ರತಿಕ್ಷಣ ಅವನ ಸ್ಮರಣೆ ಮಾಡಬೇಕು. ಕೆಲವರಿಗೆ ಅನಿವಾರ್ಯದಿಂದ ಸ್ಮರಣೆ ಮಾಡಲು ಆಗದಿದ್ದರೂ ಸಮಯಸಿಕ್ಕಾಗಲೆಲ್ಲಾ ದೇವರಿಗೆ ಶರಣಾಗಬೇಕು. ಮಹಾವಿಷ್ಣು ನಮ್ಮನ್ನು ಖಂಡಿತ ರಕ್ಷಣೆ ಮಾಡುತ್ತಾನೆ ಎಂದು ಹೇಳಿದರು.
ಕೊಡ್ಲುಮನೆಗೆ ನೂತನ ಮಾರ್ಗದ ದರ್ಶನ
ಬಳ್ಕೂರಿನಿಂದ ಕೊಡ್ಲುಮನೆಗೆ ತೆರಳುವ ಸುಮಾರು 2 ಕಿ.ಮೀ. ನೂತನ ರಸ್ತೆ ನಿರ್ವಣವಾಗಿದೆ. ಈ ಹಿಂದೆ ಇಲ್ಲಿ ರಸ್ತೆಯೇ ಇಲ್ಲವಾಗಿತ್ತು. ಈ ಮೂಲಕ ಗುರುಗಳು ತೆರಳುವ ಕ್ಷೇತ್ರಕ್ಕೆ ಹೊಸ ಮಾರ್ಗದ ದರ್ಶನವಾಗುತ್ತಿದೆ. ನಿರ್ವಣವಾದ ಹೊಸ ರಸ್ತೆಯನ್ನು ಸ್ವಾಮೀಜಿ ಉದ್ಘಾಟಿಸಿದರು.