ಪರಿಶುದ್ಧ ಭಕ್ತಿಯಿಂದ ಕಷ್ಟ ದೂರ : ಡಾ.ಡಿ.ವೀರೇಂದ್ರ ಹೆಗ್ಗಡೆ ಶುಭನುಡಿ

New Project (15)
Published on

ಬೆಳ್ತಂಗಡಿ: ಪರಿಶುದ್ಧ ಭಕ್ತಿ ಮತ್ತು ದೃಢನಂಬಿಕೆಯಿಂದ ಎಲ್ಲ ಲೌಕಿಕ ಕಷ್ಟಗಳು, ಸಮಸ್ಯೆಗಳು ಪರಿಹಾರವಾಗಿ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಮಂಗಳವಾರ ಧರ್ಮಸ್ಥಳದ ಪ್ರವಚನಮಂಟಪದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಶಿವರಾತ್ರಿ ಜಾಗರಣೆಗೆ ಪಾದಯಾತ್ರೆಯಲ್ಲಿ ಬಂದ ಭಕ್ತರಿಗೆ ಶುಭಹಾರೈಸಿ ಆಶೀರ್ವದಿಸಿದರು.

ದೇವರಲ್ಲಿ ಭಕ್ತಿ ಮತ್ತು ನಂಬಿಕೆಯಲ್ಲಿ ಯಾವುದೇ ರೀತಿಯ ಭಯ, ಸಂಶಯ ಇರಬಾರದು. ನಾವು ಕೊಂಚ ತಪ್ಪಿದರೂ ದೇವರು ನಮ್ಮ ರಕ್ಷಣೆ ಮಾಡುತ್ತಾರೆ. ನಂಬಿಕೆ ಮತ್ತು ವಿಶ್ವಾಸದಿಂದ ನಮ್ಮ ದೋಷಗಳ ದಮನವಾಗುತ್ತದೆ. ಭಕ್ತಿಯಲ್ಲಿ ದೈಹಿಕ ಶಕ್ತಿಗಿಂತಲೂ ಮಾನಸಿಕ ಶಕ್ತಿ, ಸಂಕಲ್ಪ ಮಿಗಿಲಾದುದು ಎಂದರು.

ಪಾದಯಾತ್ರಿಗಳಿಗೆ ನಿರಂತರ ಪ್ರೇರಣೆ, ಮಾರ್ಗದರ್ಶನ ನೀಡುತ್ತಿರುವ ಬೆಂಗಳೂರಿನ ಗುರು ಹನುಮಂತಪ್ಪ ಸ್ವಾಮೀಜಿ ಮತ್ತು ಬಳಗದವರನ್ನು ಹೆಗ್ಗಡೆಯವರು ಅಭಿನಂದಿಸಿದರು.

ನಾಗಸಾಧು ಧನಂಜಯ ಗಿರಿ ಗುರೂಜಿ ಮಾತನಾಡಿ, ಗರ್ಭಗುಡಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನವಾದರೆ, ನಾವು ಹೊರಗೆ ಬಂದು ಬೀಡಿನಲ್ಲಿ ಮಾತನಾಡುವ ಮಂಜುನಾಥನ ದರ್ಶನ, ಆಶೀರ್ವಾದ ಪಡೆದು ಪುನೀತರಾಗುತ್ತೇವೆ. ಹೆಗ್ಗಡೆಯವರ ಮೂಲಕ ನಾವು ಶ್ರೀ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದರು.

ಪಾದಯಾತ್ರೆಯ ರೂವಾರಿ ಹನುಮಂತಪ್ಪ ಗುರೂಜಿ ಶುಭ ಹಾರೈಸಿದರು. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ ಸಹಕರಿಸಿದರು. ಮರಿಯಪ್ಪ ಸ್ವಾಗತಿಸಿದರು. ಶಶಿಕುಮಾರ ಧನ್ಯವಾದವಿತ್ತರು.

ಸ್ವಚ್ಛತೆ ಕಾಪಾಡಿ

ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಬಂದವರು ನೇತ್ರಾವತಿ ನದಿಯಲ್ಲಿ ಮಿಂದು ಬಟ್ಟೆ, ಸಾಬೂನು, ತ್ಯಾಜ್ಯಗಳನ್ನು ನೀರಿಗೆ ಹಾಕಿ ಅಪವಿತ್ರ ಮಾಡಬಾರದು. ಇದರಿಂದ ಪಾಪಪ್ರಜ್ಞೆ ಹೆಚ್ಚಾಗುತ್ತದೆ ಎಂದು ನಾಗಸಾಧು ಧನಂಜಯ ಗಿರಿ ಗುರೂಜಿ ಭಕ್ತರಿಗೆ ಎಚ್ಚರಿಕೆ ನೀಡಿದರು. ಶಿವಕ್ಷೇತ್ರ ಯಾವಾಗಲೂ ಶಾಂತವಾಗಿದ್ದು, ಪವಿತ್ರ ಧರ್ಮಸ್ಥಳವನ್ನು ಹಾಗೂ ನೇತ್ರಾವತಿ ನದಿಯನ್ನು ಸ್ವಚ್ಛವಾಗಿಡಲು ಸಹಕರಿಸಿ ಎಂದು ಕೋರಿದರು.

ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಮಾತು ಬಿಡ ಮಂಜುನಾಥ ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ ಮಾಣಿಕ್ಯವಾಗಬೇಕು. ಎಲ್ಲರೂ ಸತ್ಯ, ಧರ್ಮ, ನ್ಯಾಯ, ನೀತಿಯ ಮಾರ್ಗದಲ್ಲಿ ನಡೆದಾಗ ಜೀವನ ಪಾವನವಾಗುತ್ತದೆ. ನಂಬಿದವರಿಗೆ ಇಂಬು ಕೊಡುವ ಧರ್ಮಸ್ಥಳದಲ್ಲಿ ಸತ್ಯ ಮತ್ತು ನ್ಯಾಯಮಾರ್ಗದಲ್ಲಿ ನಡೆದರೆ ಅವರಿಗೆ ದೇವರ ಪೂರ್ಣ ಅನುಗ್ರಹವಿರುತ್ತದೆ. ಡಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ ಧರ್ಮಾಧಿಕಾರಿ https://www.vijayavani.net/shadadhara-installation-at-donthila https://www.vijayavani.net/march-1-9-kavoor-mahalingeshwara-temple-ashtabandha-brahma-kalashotsava-preparations-in-final-stages-decorated-kavoor-environment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net