

ರಾಯಚೂರು: ಚಿತ್ರಕಲೆ ಸೇರಿದಂತೆ ಹಲವಾರು ಕಲೆಗಳಿಂದಾಗಿ ನಮ್ಮ ಸಂಸ್ಕೃತಿಗೆ ಗೌರವ ದೊರೆಯುತ್ತಿದ್ದು, ಕಲಾಕಾರರನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ ಹೇಳಿದರು.
ಸ್ಥಳೀಯ ಸಾರ್ವಜನಿಕ ಉದ್ಯಾನವನದ ಮುಂಭಾಗದ ಸ್ಟೇಷನ್ ರಸ್ತೆಯಲ್ಲಿ ಕಲಾ ಸಂಕುಲ ಸಂಸ್ಥೆಯಿಂದ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಚಿತ್ರಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಚಿತ್ರಕಲೆ ಪುರಾತನ ಕಲೆಯಾಗಿದ್ದು, ದೇಶದ ಹಲವಾರು ಕಲಾವಿದರು ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದರು.
ಇತಿಹಾಸವನ್ನು ಮೆಲಕು ಹಾಕಲು ಚಿತ್ರಗಳು ಸಹಕಾರಿಯಾಗುತ್ತಿದ್ದು, ಮಹಾನಗರಗಳಲ್ಲಿ ಮಾತ್ರ ನಡೆಯುತ್ತಿದ್ದ ಚಿತ್ರಸಂತೆಯನ್ನು ನಗರದಲ್ಲಿಯೂ ಏರ್ಪಡಿಸುವ ಮೂಲಕ ಕಲಾ ಸಂಕುಲ ಸಂಸ್ಥೆ ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಮಾತನಾಡಿ, ಕಲ್ಕತ್ತದ ಶಾಂತಿನಿಕೇತನದಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡಿದ ಜಿಲ್ಲೆಯ ಶಂಕರಗೌಡ ಬೆಟ್ಟದೂರು ತಮ್ಮ ಕೆಲಸದ ಮೂಲಕ ಜಿಲ್ಲೆಗೆ ಕೀರ್ತಿ ಕೆಲಸ ಮಾಡಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಯುವ ಕಲಾವಿದರು ಸಾಗಬೇಕು ಎಂದು ತಿಳಿಸಿದರು.
ಚಿತ್ರಸಂತೆಯಲ್ಲಿ ಕೊಲ್ಲಾಪುರದ ಡಿ.ಕೆ.ಗೋಯಲ್ಕರ್, ಹೈದರಾಬಾದ್‌ನ ತಲ್ಮೇಶ್, ಅಥಣಿಯ ಪ್ರಶಾಂತ್, ಬೆಂಗಳೂರಿನ ಡಾ.ಸೌಮ್ಯ, ಯಾದಗಿರಿಯ ಮೇಘನಾಥ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕಲಾವಿದರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಾಹಿತಿ ವೀರಹನುಮಾನ, ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಕಲಾ ಸಂಕುಲ ಸಂಸ್ಥೆ ಅಧ್ಯಕ್ಷೆ ರೇಖಾ ಬಡಿಗೇರ, ಕಾರ್ಯದರ್ಶಿ ಮಾರುತಿ ಬಡಿಗೇರ, ಶರಣಪ್ಪ ಗೋನಾಳ, ಈರಣ್ಣ ಬೆಂಗಾಲಿ, ಅಮರೇಗೌಡ, ಎಚ್.ಎಚ್.ಮ್ಯಾದಾರ, ಪಲಗುಲ ನಾಗರಾಜ, ಮುರಳೀಧರ ಕುಲಕರ್ಣಿ ಉಪಸ್ಥಿತರಿದ್ದರು.
ಬೆಂಗಳೂರು ಸೇರಿದಂತೆ ಹಲವಾರು ಮಹಾನಗರಗಳಲ್ಲಿ ಚಿತ್ರಸಂತೆಗಳು ನಡೆಯುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಚಿತ್ರಸಂತೆಗಳನ್ನು ಏರ್ಪಡಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾಗಿದೆ. ನಾನು ಮೂಲತಃ ಇಂಜಿನಿಯರ್ ಆಗಿದ್ದರೂ ಚಿತ್ರಕಲೆಯ ಮೇಲಿನ ಆಸಕ್ತಿಯಿಂದ ಕಲಾಕೃತಿಗಳನ್ನು ರಚಿಸಿದ್ದೇನೆ. - ಡಾ.ಸೌಮ್ಯ, ಚಿತ್ರಕಲಾವಿದೆ, ಬೆಂಗಳೂರು.