

ಕೆ.ಆರ್.ನಗರ: ನಮ್ಮ ಭಾರತ ದೇಶದಲ್ಲಿ ಸಾವಿರಾರು ವರ್ಷಗಳಿಂದ ಯೋಗಿಗಳು, ಋಷಿ ಮುನಿಗಳು ಪರಂಪರೆಯುತವಾಗಿ ನಡೆಸಿಕೊಂಡು ಬಂದಿರುವಂತಹ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಿರುವುದು ನಮ್ಮ ದೇಶದ ಹಿರಿಮೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಡಾ.ರಾಜಕುಮಾರ್ ಬಾನಂಗಳದಲ್ಲಿ ಪುರಸಭೆ ಮತ್ತು ಪತಂಜಲಿ ಯೋಗ ಶ್ರಮ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯೋಗಭ್ಯಾಸ ಮಾಡುವುದರಿಂದ ಪ್ರತಿಯೊಬ್ಬರೂ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಾಗಲಿದೆ ಎಂದರು.
ಯೋಗ ಎಂಬುದು ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸದ ಮಹತ್ವವನ್ನು ಇಡಿ ವಿಶ್ವಕ್ಕೆ ಸಾರುವ ಮೂಲಕ ಅದರ ಮಹತ್ವವನ್ನು ಅರಿತ ವಿಶ್ವ ಸಂಸ್ಥೆ 2014ರಲ್ಲಿ ಜೂ.21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿದ್ದು, ಜಗತ್ತಿನ ಎಚ್ಚು ದೇಶಗಳು ಯೋಗ ದಿನವನ್ನು ಆಚರಿಸುವ ಜತೆಗೆ ಕಲಿತುಕೊಂಡು ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇಂದಿನ ಆಧುನಿಕ ಮತ್ತು ಪೈಪೋಟಿಯುತವಾದ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಮಾನಸಿಕ ಒತ್ತಡಕ್ಕೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಯೋಗ ಇಂದ್ರಿಯಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಜತೆಗೆ ದುಶ್ಚಟಗಳಿಂದ ದೂರಾಗುವಂತೆ ಮಾಡುತ್ತದೆ. ಅಲ್ಲದೆ ಮನುಷ್ಯನಿಗೆ ಆರೋಗ್ಯಯುತವಾದ ಜೀವನ ನಡೆಸಲು ಒಂದು ಔಷಧವಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಶಿವನಾಯಕ್ ಸದಸ್ಯರಾದ ನಟರಾಜು, ಮಂಜುಳಾ ಚಿಕ್ಕವೀರು, ಮಾಜಿ ಸದಸ್ಯ ರಾಜ ಶ್ರೀಕಾಂತ್, ಮುಖ್ಯಾಧಿಕಾರಿ ಕೆ.ವಿ.ವೆಂಕಟೇಶ್, ಪತಂಜಲಿ ಯೋಗಾಶ್ರಮ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಯೋಗಾ ಪಟುಗಳಾದ ರೇವಣ್ಣ, ರಾ.ಸುರೇಶ್, ಸ್ಪಿನ್ ಕೃಷ್ಣಮೂರ್ತಿ, ಸುಮ, ಆನಂದ, ಸಾಲಿಗ್ರಾಮ ತಾಲೂಕು ಬಿಜೆಪಿ ಅಧ್ಯಕ್ಷ ಸಾರಾ ತಿಲಕ್ ಸೇರಿದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.