

ಕೆ.ಆರ್.ನಗರ: ಇಲ್ಲಿನ ಪುರಸಭೆಗೆ ರಾಷ್ಟ್ರಮಟ್ಟದಲ್ಲಿ ಸ್ವಚ್ಛತಾ ನಗರ ಎಂಬ ಪ್ರಶಸ್ತಿ ಸಿಗಲು ಮೂಲ ಕಾರಣಕರ್ತರಾದ ಪೌರಕಾರ್ಮಿಕರು ಕೂಡ ಅಧಿಕಾರಿಗಳು ಮತ್ತು ಅಧ್ಯಕ್ಷರೊಂದಿಗೆ ದೆಹಲಿಯಲ್ಲಿ ನಡೆಯುವ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಡಿ.ರವಿಶಂಕರ್ ತಿಳಿಸಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಇಲ್ಲಿಯವರೆಗೆ ಪ್ರಶಸ್ತಿ ಸ್ವೀಕರಿಸಲು ಅಧ್ಯಕ್ಷರು ಮತ್ತು ಅಧಿಕಾರಿಗಳು ಮಾತ್ರ ತೆರುಳುತ್ತಿದ್ದರು. ಆದರೆ ಸ್ವಚ್ಛತಾ ಪ್ರಶಸ್ತಿಗೆ ಮೂಲ ಕಾರಣಕರ್ತರಾದ ಪೌರಕಾರ್ಮಿಕರಿಗೂ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಪ್ರಸ್ತುತ ನಿರ್ಮಾಣವಾಗುತ್ತಿರುವ ಗುಂಪು ಮನೆಗಳಲ್ಲಿ ಪೌರಕಾರ್ಮಿಕರಿಗೆ ಮೀಸಲಿಡುವ ಜತೆಗೆ ಸ್ಥಳೀಯವಾಗಿ ಜಾಗ ಗುರುತಿಸಿ ಪೌರ ಕಾರ್ಮಿಕರ ಕುಟುಂಬಗಳಿಗೆ ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪೌರಕಾರ್ಮಿಕರಿಗೆ ವೇತನ ಪರಿಷ್ಕರಣೆ ಮತ್ತು ಇನ್ನಿತರ ಅನುಕೂಲ ಕಲ್ಪಿಸುವ ಸಂಬಂಧ ನಮ್ಮ ನಾಯಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದರ ಜತೆಗೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆಯುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾ ಸಪಾಯಿ ಕರ್ಮಚಾರಿ ವಿಚಕ್ಷಣಾ ಜಾಗೃತ ಸಮಿತಿ ಶಾಶ್ವತ ಸದಸ್ಯ ಕೆ.ನಂಜಪ್ಪ ಬಸವನಗುಡಿ, ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯರಾದ ಕೋಳಿಪ್ರಕಾಶ್, ಕೆ.ಎಲ್.ಜಗದೀಶ್, ಉಮೇಶ್, ನಟರಾಜ್, ಮಿಕ್ಸರ್ ಶಂಕರ್, ಮುಖ್ಯಾಧಿಕಾರಿ ರಮೇಶ್ ಮಾತನಾಡಿದರು.
ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಮೈಸೂರು ರಸ್ತೆ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮೆರವಣಿಗೆಯಲ್ಲಿ ತೆರಳಿ ಗರಡುಗಂಬ ವೃತ್ತದಲ್ಲಿರುವ ಶ್ರೀ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ವಾಣಿ ವಿಲಾಸ ರಸ್ತೆ ಮೂಲಕ ತೆರಳಿ ಪುರಸಭಾ ವೃತ್ತದಲ್ಲಿರುವ ಡಾ.ಬಾಬು ಜಗಜೀವನ ರಾಮ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವೇದಿಕೆ ಕಾರ್ಯಕ್ರಮಕ್ಕೆ ಬಂದರು.
ಇದೇ ವೇಳೆ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಹಾಗೂ ಎಲ್ಲ ಪೌರಕಾರ್ಮಿಕರಿಗೂ ಸನ್ಮಾನ ನೆರವೇರಿಸಲಾಯಿತು. ಪುರಸಭೆ ಸದಸ್ಯರಾದ ಸೈಯದ್ ಸಿದ್ದೀಕ್, ಮಂಜುಳಾ ಚಿಕ್ಕವೀರು, ಎಸ್.ಶಂಕರ್, ಸಂತೋಷಗೌಡ, ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಕೃಷ್ಣ, ಗೌರವಾಧ್ಯಕ್ಷ ಎಸ್.ಪಳನಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ಕುಮಾರ, ಉಪಾಧ್ಯಕ್ಷ ನಂಜುಂಡ, ಖಜಾಂಚಿ ಹೇಮಂತಕುಮಾರ್, ಮುಖಂಡರಾದ ಪುಟ್ಟರಾಜು, ಮಧುವನಹಳ್ಳಿ ಆದರ್ಶ, ನವೀದ್, ಧರ್ಮ, ಆರೋಗ್ಯ ನಿರೀಕ್ಷಕರಾದ ರಾಜೇಂದ್ರ, ಎಚ್.ಎಸ್.ಲೋಕೇಶ್ ಇತರರು ಇದ್ದರು.