

ಸಕಲೇಶಪುರ: ಅತಿಯಾದ ಮಳೆಗೆ ತಾಲೂಕಿನ ಕೆಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಇದಕ್ಕೆ ರೆಸಾರ್ಟ್ ಹಾಗೂ ಹೋಂ ಸ್ಟೇಗಳೇ ಕಾರಣ ಎಂದು ರಾಜ್ಯ ಸರ್ಕಾರ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಸಕಲೇಶಪುರ ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಮಸ್ತಾರೆ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಸಚಿವರು ಅರಣ್ಯ ಒತ್ತುವರಿ ತೆರವು ಕಾರ್ಯ ಪ್ರಾರಂಭಿಸಿರುವುದು ನಿಜಕ್ಕೂ ಅಭಿನಂದನಾರ್ಹ. ತಾಲೂಕಿನಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ನಮ್ಮ ಹಿಡುವಳಿ ಭೂಮಿಗಳಲ್ಲಿ ವಹಿವಾಟು ಮಾಡುತ್ತಿದ್ದಾರೆಯೇ ಹೊರತು ಅರಣ್ಯವನ್ನು ಅತಿಕ್ರಮಣ ಮಾಡಿಲ್ಲ. ಯಾರಾದರೂ ಅನಧಿಕೃತವಾಗಿ ಅರಣ್ಯದಲ್ಲಿ ಹೋಂಸ್ಟೇ ಹಾಗೂ ರೆಸಾರ್ಟ್ ನಿಮಾಣ ಮಾಡಿದಲ್ಲಿ ಅಂತಹ ರೆಸಾರ್ಟ್‌ಗಳನ್ನು ತೆರವುಗೊಳಿಸಲಿ ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ಪದೇ ಪದೆ ಒಂದು ಉದ್ಯಮದ ವಿರುದ್ಧವಾಗಿ ಮಾತನಾಡಿದರೆ ಸಾಮಾನ್ಯ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತದೆ. ಗುಡ್ಡ ಕುಸಿತ ಪ್ರಕರಣಗಳಿಗೆ ಅದರದ್ದೇ ಆದ ಹಲವಾರು ಕಾರಣಗಳಿದೆ. ರಾಷ್ಟ್ರೀಯ ಹೆದ್ದಾರಿ 75 ರಸ್ತೆ ವಿಸ್ತರಣೆ, ಪಶ್ಚಿಮ ಘಟ್ಟದಲ್ಲಿ ಎತ್ತಿನಹೊಳೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿರುವುದು ತಾಲೂಕಿನಲ್ಲಿ ಭೂಕುಸಿತವಾಗಲು ಪ್ರಮುಖ ಕಾರಣ. ಈಗಾಗಲೇ ಸೆಕ್ಷನ್ 4 ಹೆಸರಿನಲ್ಲಿ ಸುಮಾರು 508 ಜನರ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಇದು ಖಂಡನೀಯ ಎಂದರು.
ಹೋಂ ಸ್ಟೇ ಸಂಘದ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ನಮ್ಮ ಖಾಸಗಿ ಜಮೀನಿನಲ್ಲಿ ಸರ್ಕಾರದ ನಿಬಂಧನೆಗಳಿಗೆ ಒಳಪಟ್ಟು ಉದ್ಯಮ ಮಾಡಲಾಗುತ್ತಿದೆ. ಅರಣ್ಯ ಸಚಿವರ ಆದೇಶದಿಂದ ರೆಸಾರ್ಟ್‌ಗಳಿಗೆ ಬರುವ ಅತಿಥಿಗಳು ಬುಕ್ಕಿಂಗ್ ಮಾಡಲು ಅಂಜುತ್ತಿದ್ದಾರೆ. ಭೂಕುಸಿತಕ್ಕೆ ಎತ್ತಿನಹೊಳೆ ಯೋಜನೆ ಹಾಗೂ ಡ್ಯಾಮ್‌ನಿಂದ ವಿದ್ಯುತ್ ತೆಗೆಯುವ ಯೋಜನೆಯಿಂದ ತೊಂದರೆಯಾಗಿದೆ ವಿನಃ ರೆಸಾರ್ಟ್ ಮತ್ತು ಹೋಂ ಸ್ಟೇಗಳಿಂದಲ್ಲ ಎಂದರು.
ರೆಸಾರ್ಟ್ ಸಂಘದ ಕಾರ್ಯದರ್ಶಿ ಕಾಡುಮಕ್ಕಿ ಹರೀಶ್ ಎಂದರು, ನಿರ್ದೇಶಕ ಬೋಬುಚ್ ಸುದ್ದಿಗೋಷ್ಠಿಯಲ್ಲಿದ್ದರು