

ಮೈಸೂರು: ರಂಗವಲ್ಲಿ ತಂಡದ ವತಿಯಿಂದ ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನಾಧರಿಸಿದ ‘ಪಾರ್ಶ್ವಸಂಗೀತ’ ನಾಟಕ ಪ್ರದರ್ಶನವನ್ನು ಸೆ.30 ಮತ್ತು ಅ.1 ರಂದು ಸಂಜೆ 6.30ಕ್ಕೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ರಂಗಾಯಣದ ಹಿರಿಯ ಕಲಾವಿದ ಪ್ರಶಾಂತ್ ಹಿರೇಮಠ ಈ ನಾಟಕ ನಿರ್ದೇಶಿಸಿದ್ದಾರೆ. ಯುವ ಸಾಹಿತಿ ಬಿ.ಪಿ.ಅರುಣ್ ರಂಗರೂಪ ಮಾಡಿರುವ ನಾಟಕದ ರಂಗವಿನ್ಯಾಸ ಎಚ್.ಕೆ.ದ್ವಾರಕಾನಾಥ್, ಸಂಗೀತ ವಿಶ್ವಾಸ್‌ಕೃಷ್ಣ ನಿರ್ವಹಿಸಲಿದ್ದಾರೆ. ಬೆಳಕಿನ ವಿನ್ಯಾಸ- ಕೃಷ್ಣಕುಮಾರ್ ನಾರ್ಣಕಜೆ, ವಸ್ತ್ರವಿನ್ಯಾಸ - ಕೆ.ಆರ್.ನಂದಿನಿ, ಪ್ರಚಾರ ವಿನ್ಯಾಸ-ರವಿಪ್ರಸಾದ್ ಮಾಡಲಿದ್ದಾರೆ.
ಪಾರ್ಶ್ವಸಂಗೀತ ನಾಟಕ ಇಂದಿಗೂ ಜನಮಾನಸದಲ್ಲಿ ಉಳಿದಿರುವ 1940ರ ದಶಕದಿಂದ 70ರ ದಶಕಗಳವರೆಗಿನ ಹಿಂದಿ ಚಿತ್ರಗೀತೆಗಳೊಂದಿಗಿನ ಅವಿನಾಭಾವ ಸಂಬಂಧವನ್ನು ತೆರೆದಿಡುತ್ತದೆ. ಶಾಮಾ ಚಿಕ್ಕಪ್ಪನಿಗೆ ಹಾಡುಗಳೆಂದರೆ ಪಂಚಪ್ರಾಣ. ಓದೆಂದರೆ ಪ್ರಾಣಸಂಕಟ. ಬೆಂಕಿ ನವಾಬನಂತಿರುವ ಅಜ್ಜನಿಗೋ ಮಗನನ್ನು ಕಂಡರೆ ಅಸಹನೆ. ಈ ಕೋಪ-ತಾಪಗಳ ನಡುವೆಯೇ ಶಾಮಾ ಚಿಕ್ಕಪ್ಪ-ಕಾಕೂವಿನ ಮದುವೆ. ನವದಂಪತಿ ಸರಸ-ವಿರಸ, ನಾಟಕದುದ್ದಕ್ಕೂ ತಿಳಿಗಾಳಿಯಂತೆ ಆವರಿಸಿಕೊಳ್ಳುವ ಹಾಸ್ಯ, ಅಲ್ಲಲ್ಲಿ ಹಿಂದಿ ಗಾನಲೋಕದ ದಂತಕತೆಗಳೆನಿಸಿದ ಕೆ.ಎಲ್.ಸೈಗಲ್, ತಲತ್ ಮಹಮೂದ್, ಮಹಮದ್ ರಫಿ, ಕಿಶೋರ್‌ಕುಮಾರ್, ಶಂಶಾದ್ ಬೇಗಂ, ಲತಾಮಂಗೇಶ್ಕರ್, ಮನ್ನಾಡೆ ಅವರ ಬಂಗಾರದ ಹಾಡುಗಳು ಪ್ರೇಕ್ಷಕರನ್ನು ಬೇರೆಯದೇ ಲೋಕಕ್ಕೆ ಕೈಹಿಡಿದು ಕರೆದೊಯ್ಯುತ್ತವೆ.