ಬಗೆಹರಿದ ಮೆಡಿಕಲ್ ಕಾಲೇಜ್ ಸ್ಥಳ ಗೊಂದಲ

NEHARU OLEKAR NEW
Published on

ವಿಜಯವಾಣಿ ಸುದ್ದಿಜಾಲ ಹಾವೇರಿ

ಜಿಲ್ಲೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜ್ ಸ್ಥಾಪಿಸಲು ಸ್ಥಳದ ವಿಷಯದಲ್ಲಿ ಮೂಡಿದ್ದ ಗೊಂದಲ ಕೊನೆಗೂ ಬಗೆಹರಿದಿದ್ದು, ಈಗಾಗಲೇ ಗುರುತಿಸಿರುವಂತೆ ದೇವಗಿರಿಯಲ್ಲಾಪುರದ ಬಳಿಯೇ ಕಾಲೇಜ್ ನಿರ್ವಣಗೊಳ್ಳಲಿದೆ.

ದೇವಗಿರಿಯಲ್ಲಾಪುರ ಬಳಿ ಗುರುತಿಸಿರುವ ಸ್ಥಳ ತಗ್ಗು ಪ್ರದೇಶದಲ್ಲಿದೆ. ಅಲ್ಲದೇ ನಗರ, ಜಿಲ್ಲಾಸ್ಪತ್ರೆ, ರಾಷ್ಟ್ರೀಯ ಹೆದ್ದಾರಿಯಿಂದ ದೂರದ ಪ್ರದೇಶದಲ್ಲಿದೆ. ಅಲ್ಲಿಗೆ ಹೋಗಲು ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತಾಗುವುದು ಎಂದು ಸಾಕಷ್ಟು ಜನರು ಹಾಗೂ ಶಾಸಕ ನೆಹರು ಓಲೇಕಾರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ಮೆಡಿಕಲ್ ಸ್ಥಾಪನೆಯ ಸ್ಥಳದ ವಿಷಯದಲ್ಲಿ ಗೊಂದಲ ಉಂಟಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಸಭೆ ಕರೆದು ಸೂಕ್ತ ಜಾಗೆಯನ್ನು ಅಂತಿಮಗೊಳಿಸುವ ಭರವಸೆ ನೀಡಿದ್ದರು. ಅದು ಸಾಧ್ಯವಾಗಿರಲಿಲ್ಲ. ಇದೀಗ ಶಾಸಕ ನೆಹರು ಓಲೇಕಾರ ಅವರೇ ಜಾಗದ ವಿಷಯದಲ್ಲಿ ತಮ್ಮ ಅಭಿಪ್ರಾಯ ಬದಲಾಯಿಸಿದ್ದು, ಜಾಗೆಯ ಗೊಂದಲ ಬಗೆಹರಿದಂತಾಗಿದೆ.

ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ನೆಹರು ಓಲೇಕಾರ, ಜಿಲ್ಲೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜ್​ನ ಉಸ್ತುವಾರಿ ಉದ್ದೇಶದಿಂದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕೊಠಡಿಯೊಂದರಲ್ಲಿ ಫೆ. 14ರಿಂದ ಕಚೇರಿ ಕಾರ್ಯಾರಂಭವಾಗಲಿದೆ. ಕಟ್ಟಡ ನಿರ್ವಣಕ್ಕೆ ಟೆಂಡರ್ ಕರೆಯಲಾಗಿದ್ದು, ದೇವಗಿರಿಯಲ್ಲಾಪುರ ಗ್ರಾಮದ ಬಳಿಯಲ್ಲಿ ಈಗಾಗಲೇ ಗುರುತಿಸಿರುವ ಜಾಗೆಯಲ್ಲಿಯೇ ಕಾಲೇಜ್ ನಿರ್ವಿುಸಲಾಗುವುದು ಎಂದು ತಿಳಿಸಿದರು.

ಬಹುದಿನದ ಬೇಡಿಕೆಯಾಗಿದ್ದ ಮೆಡಿಕಲ್ ಕಾಲೇಜ್ ಮಂಜೂರಾಗಿದೆ. ಅಧಿವೇಶನದ ಬಳಿಕ ಮುಖ್ಯಮಂತ್ರಿಗಳ ದಿನಾಂಕ ಪಡೆದು ಶಂಕುಸ್ಥಾಪನೆ ನೆರವೇರಿಸಲಾಗುವುದು. ಸದ್ಯಕ್ಕೆ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಆಡಳಿತಾಧಿಕಾರಿ ಕಚೇರಿ ಉದ್ಘಾಟಿಸಲಾಗುವುದು. ಈಗಾಗಲೇ ಡಾ. ಉದಯ ಮುಳಗುಂದ ಅವರು ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದು, ಅಧಿಕಾರ ಸ್ವೀಕರಿಸಿದ್ದಾರೆ ಎಂದರು.

ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಬಿ.ಸಿ. ಪಾಟೀಲ, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು. ನೆಲೋಗಲ್ ಬಳಿಯ ಜಾಗೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದಾಗ ಅಗತ್ಯ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರದ ಯೋಜನೆಯಡಿ ತುರ್ತು ಚಿಕಿತ್ಸಾ ಘಟಕ (ಟ್ರಾಮಾ ಕೇರ್ ಸೆಂಟರ್) ಸ್ಥಾಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಮೆಡಿಕಲ್ ಕಾಲೇಜ್​ಗೆ 2020-21ನೇ ಸಾಲಿಗೆ ಪ್ರವೇಶಾತಿ ಮಾಡಿಕೊಳ್ಳುವ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ. ನಾಗರಾಜ, ಬಾಬುಸಾಬ ಮೋಮಿನಗಾರ, ನಂಜುಂಡೇಶ ಕಳ್ಳೇರ, ಲಲಿತಾ ಗುಂಡೇನಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net