

ವಿಜಯಪುರ: ಭಯೋತ್ಪಾದನೆ ಎಂಬ ಜಾಗತಿಕ ಪಿಡುಗನ್ನು ಸಾಮೂಹಿಕವಾಗಿ ಎದುರಿಸಲು ನಾಗರಿಕರಲ್ಲಿ ಏಕತೆ, ಶಾಂತಿ ಮತ್ತು ದೇಶಪ್ರೇಮದ ಪ್ರಜ್ಞೆ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರಿಯ ಭಯೋತ್ಪಾದನೆ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
ಇಂದಿನ ಯುವಪೀಳಿಗೆಗೆ ದೇಶದ ಸಂಸ್ಕೃತಿ, ಸಂಸ್ಕಾರ, ಶಾಂತಿಯ ಮೌಲ್ಯಗಳನ್ನು ಕಲಿಸಬೇಕು. ನಾವು ಭಾರತವನ್ನು ಭರವಸೆ, ಶಕ್ತಿ ಮತ್ತು ಒಗ್ಗಟ್ಟಿನ ಸಂಕೇತವನ್ನಾಗಿಸಿ, ಶಾಂತಿ, ಸಹಬಾಳ್ವೆಯ ತೋಟವನ್ನಾಗಿಸುವ ಮೂಲಕ ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆಗೆ ಸಂಕಲ್ಪ ಮಾಡಬೇಕಿದೆ ಎಂದು ತಿಳಿಸಿದರು.
ವಿಶ್ವನಾಥ ಕಲಗೊಂಡ ಮಾತನಾಡಿ, ಭಯೋತ್ಪಾದನೆಯ ಪರಿಣಾಮಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಅಗತ್ಯತೆ ಇದೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಲು ಎಲ್ಲರೂ ಸಕ್ರಿಯರಾಗಬೇಕಿದೆ ಎಂದು ತಿಳಿಸಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿದರು. ಗ್ರಾಮಸ್ಥರಾದ ವಿಶ್ವನಾಥ ಹಂಡಿ, ಬಸವರಾಜ ಸಾರವಾಡ, ಸುರೇಶ ಕತ್ನಳ್ಳಿ, ಪ್ರವೀಣ ಅರಕೇರಿ, ಶಂಕರ ಲೋಣಿ ಮತ್ತಿತರರಿದ್ದರು.