

ಮೈಸೂರು : ಇ-ಸ್ವತ್ತು ಮತ್ತು ಇ-ಖಾತೆಯಲ್ಲಿಯಾಗಿರುವ ಗೊಂದಲ ಪರಿಹರಿಸಲು ನಗರ ಪಾಲಿಕೆ ಮುಂದಾಗಬೇಕು ಎಂದು ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಆಗ್ರಹಿಸಿದ್ದಾರೆ.
ಇ-ಸ್ವತ್ತು ಹಾಗೂ ಇ-ಖಾತೆಗಳನ್ನು ಯಾರಿಗೆ ಕೊಡುತ್ತಿದ್ದಾರೆ? ಯಾವ ಆಸ್ತಿಗೆ ನೀಡಲಾಗುತ್ತಿದೆ ಎಂಬುವುದನ್ನು ನಗರ ಪಾಲಿಕೆಯವರು ತಿಳಿಸಬೇಕು. ಅಶೋಕಪುರಂ, ಸುಣ್ಣದಕೇರಿ ಸೇರಿದಂತೆ ಹಲವು ಬಡಾವಣೆಗಳಿಗೆ ಸರಿಯಾದ ದಾಖಲಾತಿಗಳು ಇಲ್ಲದೆ ಇರುವುದರಿಂದ ನಗರ ಪಾಲಿಕೆಯವರು ಹೇಗೆ ಇ-ಸ್ವತ್ತು ಹಾಗೂ ಇ-ಖಾತೆಗಳನ್ನು ಮಾಡಿಕೊಡುತ್ತಾರೆ. ಈ ವಿಚಾರವಾಗಿ ಮುಡಾಗೆ ಜನರು ಪ್ರತಿನಿತ್ಯ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಸಮಧಾನ ವ್ಯಕ್ತಪಡಿಸಿದರು.
ನಗರದ ಪ್ರದೇಶಗಳಲ್ಲಿ ಹಳ್ಳಿಯ ಸೊಗಡು ಹೊಂದಿರುವ ಬಡಾವಣೆಗಳಲ್ಲಿ ಸರಿಯಾದ ದಾಖಲೆಗಳು ಇಲ್ಲ. ಹೀಗಾದರೆ ಜನಸಾಮಾನ್ಯರ ಪಾಡೇನು? ದಾಖಲಾತಿಕರಣ ಮಾಡಲು ಅಧಿಕಾರಿಗಳು ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ನಗರದಲ್ಲಿ 73 ಅನಧಿಕೃತ ಬಡಾವಣೆಗಳು ಇವೆ. ಇವುಗಳಿಂದ ಕಂದಾಯ ಕಟ್ಟಿಸಿಕೊಳ್ಳುತ್ತಿರುವ ನಗರ ಪಾಲಿಕೆ ಇವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಜಿಲ್ಲಾಧಿಕಾರಿ ಸಾರ್ವಜನಿಕರ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಇದ್ದರು.