

ಬೆಳಗಾವಿ: ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್ ಬಳಸದಂತೆ ಎಲ್ಲರೂ ಸಂಕಲ್ಪ ಮಾಡುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ ಎಂದು ಬೆಳಗಾಂ ಶುಗರ್ಸ್ ಕಾರ್ಖಾನೆ ಚೇರಮನ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ಪ್ರದಿಪಕುಮಾರ ಇಂಡಿ ಹೇಳಿದರು.
ಇಲ್ಲಿನ ಬೆಳಗಾಂ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಮುಕ್ತ ಪರಿಸರ ಈ ವರ್ಷದ ಆಚರಣೆಯಾಗಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆ ಮನುಷ್ಯರು ಸೇರಿದಂತೆ ಎಲ್ಲ ಜೀವ ಸಂಕುಲಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ನಮ್ಮ ಸುತ್ತಲಿನ ಪರಿಸರವನ್ನು ಹಸಿರುಗೊಳಿಸುವುದು ಮತ್ತು ಪರಿಸರ ಸ್ನೇಹಿ ಜೀವನ ಕ್ರಮದಿಂದ ಮಾತ್ರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದಾಗಿದೆ. ಎಲ್ಲರೂ ಪರಿಸರ ಸಂರಕ್ಷಣೆ ಜವಾಬ್ದಾರಿ ಹೊಂದಬೇಕು ಎಂದರು.
ಕಾರ್ಖಾನೆ ಆವರಣದಲ್ಲಿ ಈಗಾಗಲೇ ಸುಮಾರು 3500 ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿಯೂ ನಮ್ಮ ಕಾರ್ಖಾನೆ ಆವರಣದಲ್ಲಿ ಸುಮಾರು 1500 ವಿವಿಧ ತಳಿಯ ಸಸಿಗಳನ್ನು ನೆಟ್ಟು ಪೋಷಿಸಲಾಗುವುದು ಎಂದು ತಿಳಿಸಿದರು. ಉಪಾಧ್ಯಕ್ಷ ಎಲ್.ಆರ್.ಕಾರಗಿ, ಎ.ಎಸ್.ರಾಣಾ, ಪ್ರಧಾನ ವ್ಯವಸ್ಥಾಪಕ ಎಸ್.ಆರ್.ಬಿರ್ಜೆ, ಸಹಾಯಕ ಪ್ರಧಾನ ವ್ಯವಸ್ಥಾಪಕ ಎನ್.ಬಿ ಚೌಗಲಾ ಇತರರಿದ್ದರು.