

ಮೈಸೂರು: ಗ್ರಾಹಕರ ಕುಂದುಕೊರತೆಗಳನ್ನು ಅಧಿಕಾರಿಗಳ ಹಂತದಲ್ಲೇ ಬಗೆಹರಿಸುವ ಇಚ್ಛಾಶಕ್ತಿ ತೋರಿಸಿದರೆ ಅವುಗಳ ನಿವಾರಣೆಗಾಗಿ ನ್ಯಾಯಾಲಯ ಅಥವಾ ಇನ್ನಿತರ ಆಯೋಗಗಳ ಮೊರೆ ಹೋಗುವುದು ತಪ್ಪಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಹೇಳಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮತ್ತು ಸೆಸ್ಕ್ ಸಹಯೋಗದಲ್ಲಿ ಕಡಕೊಳದಲ್ಲಿರುವ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರ್‌ಗಳ ಸಂಘದ ಸಭಾಂಗಣದಲ್ಲಿ ಶುಕ್ರವಾರ ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆ ಅಧ್ಯಕ್ಷರು, ಸದಸ್ಯರು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾನೂನು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗ್ರಾಹಕರ ಕುಂದುಕೊರತೆಗಳನ್ನು ಕಾನೂನಾತ್ಮಕವಾಗಿ ಯಾವ ರೀತಿಯಲ್ಲಿ ಬಗೆಹರಿಸಬೇಕೆಂಬ ಕುರಿತು ಮಾಹಿತಿ ನೀಡಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಯಾವುದೇ ಗ್ರಾಹಕರಿಗೆ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಅದರ ಪರಿಹಾರಕ್ಕಾಗಿ ತಮ್ಮ ಕೈಗೆಟುಕುವ ಹಂತದ ಅಧಿಕಾರಿಗಳಿಗೆ ಮನವಿ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಸಕಾರಾತ್ಮಕ ಮನಸ್ಥಿತಿಯಲ್ಲಿ ಕೆಲಸ ಮಾಡಿ, ಸಮಸ್ಯೆ ಪರಿಹರಿಸಿದರೆ ಗ್ರಾಹಕರ ಕುಂದುಕೊರತೆಗಳು ಶೀಘ್ರವೇ ಇತ್ಯರ್ಥವಾಗಲಿದೆ ಎಂದು ಹೇಳಿದರು.
ಆದರೆ ಕುಂದುಕೊರತೆಗಳನ್ನು ನಿವಾರಿಸುವಲ್ಲಿ ಅಧಿಕಾರಿಗಳು ಜವಾಬ್ದಾರಿ ನಿರ್ವಹಿಸಲು ಹಿಂದೇಟು ಹಾಕಿದರೆ, ಅಂತಹ ಸಂದರ್ಭಗಳಲ್ಲಿ ಗ್ರಾಹಕರು ನ್ಯಾಯಾಲಯದ ಮೆಟ್ಟಿಲು ಏರಬೇಕಾದ ಪರಿಸ್ಥಿತಿ ಉಂಟಾಗಲಿದೆ. ಹೀಗಾಗಿ ಪ್ರತಿಯೊಬ್ಬ ಅಧಿಕಾರಿಯೂ ಇಚ್ಛಾಶಕ್ತಿಯಿಂದ ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸಿದರೆ ಗ್ರಾಹಕರ ದೂರುಗಳು ಆಯೋಗದ ಹಂತಕ್ಕೆ ಕೊಂಡೊಯ್ಯುವ ಸಂದರ್ಭಗಳು ನಿವಾರಣೆಯಾಗಲಿದೆ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯ ಎಚ್.ಕೆ.ಜಗದೀಶ್ ಮಾತನಾಡಿ, ದೇಶದಲ್ಲಿ ವಿದ್ಯುಚ್ಛಕ್ತಿ ಸಂಬಂಧಿಸಿದಂತೆ ಕಾನೂನುಗಳು ಹೇಗಿತ್ತು ಎಂದು ಅರಿತು, ಅವಲೋಕಿಸಿದರೆ ಗ್ರಾಹಕರ ಕುಂದುಕೊರತೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ ಎಂದರು.
ದೇಶದಲ್ಲಿ ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ 1887ರಲ್ಲಿ ಮೊದಲ ಬಾರಿಗೆ ಕಾನೂನು ಜಾರಿಗೆ ತರಲಾಯಿತು. ಬ್ರಿಟಿಷರ ಆಳ್ವಿಕೆಯಲ್ಲಿ ಜಾರಿಗೊಳಿಸಲಾದ ಈ ಕಾನೂನಿನಲ್ಲಿ ಜೀವ ರಕ್ಷಣೆಗಾಗಿ ಕೆಲವು ಸೆಕ್ಷನ್‌ಗಳನ್ನು ಅಳವಡಿಸಲಾಗಿತ್ತು. ನಂತರದ ದಿನಗಳಲ್ಲಿ ವಿದ್ಯುತ್ ಉತ್ಪಾದನೆಗೆ ಹಲವು ಕ್ಷೇತ್ರಗಳು ಮತ್ತು ಆವಿಷ್ಕಾರಗಳು ಹುಟ್ಟಿಕೊಂಡ ಪರಿಣಾಮ ಕಾಲಕಾಲಕ್ಕೆ ತಕ್ಕಂತೆ ಕಾನೂನುಗಳು ಬದಲಾವಣೆಗೊಂಡಿತು ಎಂದರು.
ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕುಂದುಕೊರತೆಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಹೋದಲ್ಲಿ, ಹೈಕೋರ್ಟ್‌ವರೆಗೂ ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಿಮ್ಮ ಕಾರ್ಯವ್ಯಾಪ್ತಿ, ಯಾವ ಕಾನೂನು ಏನನ್ನು ಹೇಳಲಿದೆ, ಯಾವ ಕಾನೂನು ಅನ್ವಯಿಸಬೇಕು ಎಂಬುದನ್ನು ಅರಿತು ನ್ಯಾಯ ಕಲ್ಪಿಸಬೇಕು ಎಂದು ಹೇಳಿದರು.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯ ಜಾವೇದ್ ಅಖ್ತರ್ ಮಾತನಾಡಿ, ಮಾಹಿತಿ ಕೊರತೆ ಇರುವ ಕಾರಣ ಜನರಿಗೆ ತಮ್ಮ ಸಮಸ್ಯೆಗಳ ಬಗ್ಗೆ ದೂರು ನೀಡಲು ಬರುತ್ತಿಲ್ಲ. ಈ ನಿಟ್ಟಿನಲ್ಲಿ ಜನಸಾಮಾನ್ಯರು ದೂರುಗಳು ಯಾರಿಗೆ, ಎಲ್ಲಿಗೆ ನೀಡಬೇಕೆಂಬ ಬಗ್ಗೆ ಮಾಹಿತಿ ತಿಳಿಸಬೇಕು. ಇದಕ್ಕಾಗಿ ಪ್ರತಿ ಎಸ್ಕಾಂಗಳ ಕಾರ್ಪೋರೇಟ್ ಕಚೇರಿಗಳ ವೆಬ್ಸೈಟ್‌ಗಳು, ಮೊಬೈಲ್ ಆ್ಯಪ್ ಹಾಗೂ ನೋಟಿಸ್ ಬೋರ್ಡ್‌ನಲ್ಲಿ ಮಾಹಿತಿ ನೀಡಬೇಕು ಎಂದರು.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿ ಸಿದ್ದೇಶ್ವರ್, ಮೈಸೂರು ವಲಯದ ಮುಖ್ಯ ಇಂಜಿನಿಯರ್ ಡಿ.ಜೆ.ದಿವಾಕರ್, ಹಾಸನ ವಲಯದ ಮುಖ್ಯ ಇಂಜಿನಿಯರ್ ಹರೀಶ್‌ಕುಮಾರ್, ಸೆಸ್ಕ್ ಮುಖ್ಯ ಆರ್ಥಿಕ ಅಧಿಕಾರಿ ಜಿ.ರೇಣುಕಾ, ಪ್ರಧಾನ ವ್ಯವಸ್ಥಾಪಕಿ(ತಾಂತ್ರಿಕ) ಶರಣಮ್ಮ ಎಸ್. ಜಂಗಿನ, ಆಂತರಿಕ ಲೆಕ್ಕ ಪರಿಶೋಧಕಿ ನಿಂಗರಾಜಮ್ಮ ಇತರರಿದ್ದರು.
ಕಾರ್ಯಾಗಾರದಲ್ಲಿ ವಿದ್ಯುತ್ ಸರಬರಾಜಿನ ನಿಯಮಗಳು ಮತ್ತು ಕಾರ್ಯಕ್ಷಮತೆಯ ಮಾನದಂಡಗಳು ವಿಷಯ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ತಾಂತ್ರಿಕ ನಿರ್ದೇಶಕ ಶ್ರೀನಿವಾಸಪ್ಪ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿಯಮಗಳ ಕುರಿತು ಆಯೋಗದ ನ್ಯಾಯಾಧೀಶ ಹಾಗೂ ಕಾನೂನು ಸಲಹೆಗಾರರಾದ ಐ.ಎಫ್.ಬಿದರಿ, ಕೆಇಆರ್‌ಸಿ ನಿಯಮಗಳು 2004 ವಿಷಯದ ಕುರಿತಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಜಿಲ್ಲಾ ನ್ಯಾಯಾಧೀಶ ಎನ್. ಕೃಷ್ಣಯ್ಯ ಅವರು ಮಾಹಿತಿ ನೀಡಿದರು. ಬಳಿಕ ಸಂವಾದ ಮತ್ತು ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.