ಗ್ರಾಹಕರ ದೂರು 15 ದಿನದಲ್ಲಿ ಇತ್ಯರ್ಥಪಡಿಸಿ

21 NRD 7
Published on

ನರಗುಂದ: ಗ್ರಾಹಕರಿಗೆ ಸಂಬಂಧಿಸಿದ ದೂರುಗಳನ್ನು 15 ದಿನಗಳ ಒಳಗಾಗಿ ಇತ್ಯರ್ಥಪಡಿಸಬೇಕು ಎಂದು ಕರ್ನಾಟಕ ಗ್ರಾಹಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಸ್ಥಾಪಕ ಸೋಮಶೇಖರ ವಿ.ಕೆ. ಹೇಳಿದರು.

ಪಟ್ಟಣದ ಬಾಬಾಸಾಹೇಬ ಭಾವೆ ಕಲಾ ಭವನದಲ್ಲಿ ಚಿನ್ನಾಂಬಿಕಾ ಇನ್‌ಸ್ಟಿಟ್ಯೂಟ್ ಪ್ಯಾರಾ ಮೆಡಿಕಲ್ ಕಾಲೇಜ್, ಟೆಲಿಕಾಂ ರೆಗ್ಯುಲೇಟರ್ ಅಥಾರಿಟಿ ಆಫ್ ಇಂಡಿಯಾ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಗ್ರಾಹಕರ ಜಾಗೃತಿ, ಹಕ್ಕುಗಳ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ತಾಂತ್ರಿಕ ಯುಗದಲ್ಲಿ ಮತ ಹಾಕುವುದು ಮುಖ್ಯವಲ್ಲ. ಮೂಲಭೂತ ಹಕ್ಕು ಮತ್ತು ಜವಾಬ್ದಾರಿಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ಹೊಂದಿರಬೇಕು ಎಂದರು.

ಹುಬ್ಬಳ್ಳಿ ಎನ್‌ಜಿಒ ಸಂಕಲ್ಪ ಸಂಸ್ಥೆಯ ಸಿಕಂದರ ಮೀರಾನಾಯ್ಕರ್ ಮಾತನಾಡಿ, ಜಾಲತಾಣಗಳ ಮೋಸ ಬಲೆಗೆ ಯುವಕ -ಯುವತಿಯರು ಬೀಳುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿವೆ. ಮೋಸದ ಜಾಹೀರಾತು ಮತ್ತು ಹಣ ಹೂಡಿಕೆಯ ಮೋಸದ ಜಾಲಕ್ಕೆ ಯಾರೂ ಬಲಿಯಾಗಬಾರದು ಎಂದರು.

ಪುರಸಭೆಯ ಸಮುದಾಯ ವ್ಯವಹಾರ ವಿಭಾಗದ ಅಧಿಕಾರಿ ವಿಜಯಲಕ್ಷ್ಮೀ ಹಿರೇಮಠ ಮಾತನಾಡಿ, ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ, ಸಂದೇಶಗಳ ವೀಕ್ಷಣೆ, ಆನ್‌ಲೈನ್ ಗೇಮ್ ಆಡುವುದರಿಂದ ಮೋಸಕ್ಕೊಳಗಾಗಿ ಅನೇಕರು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯೆಯ ಜೊತೆಗೆ ನಿರಂತರ ದುಡಿಮೆಯಿಂದ ವಿದ್ಯಾರ್ಥಿಗಳು ತಮ್ಮ ಸುಂದರ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇನ್‌ಸ್ಟಿಟ್ಯೂಟ್ ಆಡಳಿತಾಧಿಕಾರಿ ನಾಗೇಶ ಅಪ್ರೋಜಿ ಮಾತನಾಡಿದರು. ವೇದಾ ಚುಳಕಿ ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ಚಿದಂಬರ ನಿಂಬರಗಿ, ಉಪಸ್ಥಿತರಿದ್ದರು. ಈರಪ್ಪ ಹದ್ಲಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net