೨೦೪೭ಕ್ಕೆ ೭ ಲಕ್ಷ ಟನ್ ಕಾಫಿ ಉತ್ಪಾದನೆಗೆ ಸಂಕಲ್ಪ: ಎನ್.ಎ.ಅಪ್ಪಯ್ಯ

cofeee
Published on

ಮಡಿಕೇರಿ: ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ವತಿಯಿಂದ ಅಂತರರಾಷ್ಟ್ರೀಯ ಕಾಫಿ ದಿನವನ್ನು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಇತ್ತೀಚೆಗೆ ಆಚರಿಸಲಾಯಿತು.

ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಎನ್.ಎ.ಅಪ್ಪಯ್ಯ ಮಾತನಾಡಿ, ಭಾರತೀಯ ಕಾಫಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರಪಡಿಸುವಲ್ಲಿ ಕಾಫಿ ಡೇ ಸಂಸ್ಥಾಪಕ ದಿ.ಸಿದ್ಧಾರ್ಥ್ ಅವರು ಕೊಡುಗೆ ನೀಡಿದ್ದಾರೆ ಎಂದ ಅವರು, ಭಾರತಕ್ಕೆ ಕಾಫಿ ಪರಿಚಯವಾಗಿ ೪೦೦ ವರ್ಷಗಳು ಸಂದಿವೆ ಎಂದರು.

ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರು ೨೦೪೭ರ ವೇಳೆಗೆ ಭಾರತ ೭ ಲಕ್ಷ ಟನ್‌ಗಳಷ್ಟು ಕಾಫಿಯನ್ನು ಉತ್ಪಾದಿಸುವ ಗುರಿ ಹೊಂದಿದೆ ಎಂದು ಕಾಫಿ ದಸರಾ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಕಾಫಿ ಬೆಳೆಗಾರರು ಶ್ರಮಿಸಬೇಕು. ಹಾಗೆಯೇ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿ ಗುಣಮಟ್ಟದ ಕಾಫಿ ಉತ್ಪಾದನೆ ಮತ್ತು ನೇರ ಮಾರುಕಟ್ಟೆ ಮಾಡಿದಲ್ಲಿ ಉತ್ತಮ ಮತ್ತು ಸ್ಥಿರ ಬೆಲೆ ನಿರೀಕ್ಷಿಸಬಹುದು ಎಂದು ಸಲಹೆ ನೀಡಿದರು.

ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಎಂ.ಸಿ.ಕಾರ್ಯಪ್ಪ ಅವರು, ಆರೋಗ್ಯ ದೃಷ್ಟಿಯಿಂದ ಕಾಫಿ ಸೇವನೆಯ ಉಪಯುಕ್ತತೆಗಳನ್ನು ವಿವರಿಸಿ, ವಿದ್ಯಾರ್ಥಿಗಳು ಮತ್ತು ಯುವಜನತೆ ಉತ್ತಮ ಪಾನೀಯವಾಗಿ ಡಾರ್ಕ್ ರೋಸ್ಟೆಡ್ ಕಾಫಿಯನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ವೈದ್ಯಕೀಯ ವಿದ್ಯಾರ್ಥಿಗಳು ಇದರ ಕುರಿತು ಆಳವಾದ ಅಧ್ಯಯನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಕೊಐಎಂಎಸ್‌ನ ಡೀನ್ ಮತ್ತು ನಿರ್ದೇಶಕ ಡಾ.ಲೋಕೇಶ್ ಮಾತನಾಡಿ, ಉತ್ತಮ ಗುಣಮಟ್ಟದ ಕಾಫಿ ಸೇವನೆಯು ಆರೋಗ್ಯಕ್ಕೆ ಮತ್ತು ಜನರೊಂದಿಗೆ ಸಂವಹನಕ್ಕೆ ಉತ್ತೇಜಕವಾಗಿದೆ ಎಂದರು.

ತುರ್ತು ಚಿಕಿತ್ಸಾ ಘಟಕದ ಮುಖ್ಯಸ್ಥ ಡಾ.ಮೋಹನ್ ಅಪ್ಪಾಜಿ ಮಾತನಾಡಿ, ಕಾಫಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಗುಣಮುಖವಾಗಿರುವುದನ್ನು ಕಂಡಿದ್ದೇವೆ. ನಮ್ಮ ಕಾಫಿಯನ್ನು ಉತ್ತಮ ಗುಣಮಟ್ಟದೊಂದಿಗೆ ಉತ್ಪಾದಿಸಿ ಪ್ರಚಾರ ಮಾಡಬೇಕು. ಬಾಲ್ಯದಲ್ಲಿ ತಮ್ಮ ತಾಯಿ ಬೆಲ್ಲದೊಂದಿಗೆ ನೀಡುತ್ತಿದ್ದ ಬ್ಲ್ಯಾಕ್ ಕಾಫಿಯ ಆಹ್ಲಾದಕರ ಅನುಭವವನ್ನು ಸ್ಮರಿಸಿದ ಅವರು, ಕೊಡಗು ಕಾಫಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ಕಾರಣ, ಅಂತರರಾಷ್ಟ್ರೀಯ ಕಾಫಿ ದಿನದ ಮಾದರಿಯಲ್ಲೇ ರಾಷ್ಟ್ರೀಯ ಕಾಫಿ ದಿನವನ್ನು ಆಚರಿಸುವಂತಾಗಬೇಕು ಎಂದು ಕರೆ ನೀಡಿದರು.

ಜಾಗತಿಕ ಮತ್ತು ಕೊಡಗಿನ ಸ್ಥಾನಮಾನ ಕಾಫಿ ಮಂಡಳಿಯ ಉಪ ನಿರ್ದೇಶಕ ಡಾ.ವಿ.ಚಂದ್ರಶೇಖರ್ ಮಾತನಾಡಿ, ಭಾರತವು ವಿಶ್ವದಲ್ಲಿ ೭ನೇ ಅತಿ ದೊಡ್ಡ ಕಾಫಿ ಉತ್ಪಾದಕ ದೇಶವಾಗಿದೆ. ೫ನೇ ಅತಿ ದೊಡ್ಡ ಕಾಫಿ ರಫ್ತು ದೇಶವಾಗಿದೆ. ಈ ನಿಟ್ಟಿನಲ್ಲಿ ಕಾಫಿ ಮಂಡಳಿಯು ಯಾವಾಗಲೂ ಬೆಳೆಗಾರರಿಗೆ ಬೆಂಬಲವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದರು.

ಕೂಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೇಳ್ಯಪ್ಪ ಮಾತನಾಡಿ, ಕಾಫಿ ದಿನನಿತ್ಯದ ಅಭ್ಯಾಸಗಳಲ್ಲಿ ಒಂದಾಗಿಸಲು ಸ್ವಯಂ ಪ್ರತಿಜ್ಞೆ ಸ್ವೀಕರಿಸುವಂತಾಗಬೇಕು. ಭಾರತದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕೊಡಗು ಶೇ.೪೦ರಷ್ಟು ಕೊಡುಗೆ ನೀಡುತ್ತದೆ. ಕಾಫಿ ಕೊಡಗಿನ ಕೇವಲ ಪಾನೀಯವಲ್ಲ, ಅದೊಂದು ಸಂಸ್ಕೃತಿಯಾಗಿದೆ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಪಿಡಿಯಾಟ್ಟರಿಕ್ ವಿಭಾಗದ ಡಾ.ಪುರುಸೋತಮ್, ಕಾಫಿ ಮಂಡಳಿ ನಿರ್ಧೇಶಕ ತಲೂರು ಕಿಶೋರ್ ಕುಮಾರ್, ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದ, ಖಜಾಂಚಿ ಕುಟ್ಟೇಟಿರ ಕುಮಾರಿ ಕುಂಞಪ್ಪ, ಪ್ರಮುಖರಾದ ನಿಶಾ ಮೋಹನ್ ಸೇರಿದಂತೆ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ, ಕೂಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ ಪದಾಧಿಕಾರಿಗಳು, ಸದಸ್ಯರು, ಕೆಐಎಂಎಸ್ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರಿಗೂ ಕಾಫಿ ಕೇಕ್ ಮತ್ತು ಬಿಸಿ ಬಿಸಿ ಕಾಫಿಯನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net