

ಕುಮಟಾ: ಪುರಸಭೆಯ ಹಿಂದಿನ ಸಾಮಾನ್ಯ ಸಭೆಯಲ್ಲಿ ಚಿತ್ರಿಗಿ ಗ್ರಾಮದಲ್ಲಿ ಒಣಕಸ ವಿಲೇವಾರಿ ಘಟಕ ವಿಸ್ತರಣೆಗೆ ಸದಸ್ಯರ ವಿರೋಧ ದಾಖಲಿಸಿ ಠರಾವು ಮಾಡಿರುವಾಗ ಈಗ ಕಾಮಗಾರಿ ನಡೆಸುತ್ತಿರುವುದಾದರೂ ಹೇಗೆ? ಎಂದು ಸದಸ್ಯ ರಾಜೇಶ ಪೈ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ರಾರಾ ಅಣ್ಣಾ ಪೈ ಸಭಾಭವನದಲ್ಲಿ ಗುರುವಾರ ಕರೆದಿದ್ದ ಪುರಸಭೆಯ ಸಾಮಾನ್ಯ ಸಭೆಯ ಆರಂಭದಲ್ಲೇ ಮಂಡನೆಯಾದ ವಿಷಯದನ್ವಯ ಹಿಂದಿನ ಸಭೆಯ ನಡಾವಳಿಯನ್ನು ದೃಢೀಕರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ರಾಜೇಶ ಪೈ, ಇಂಜಿನಿಯರ್ ಉಮೇಶ ಮಡಿವಾಳ ಅವರನ್ನು ತರಾಟೆಗೆ ತೆಗೆದುಕೊಂಡರು. ಚಿತ್ರಿಗಿ ಗ್ರಾಮದ ಸರ್ವೆ ನಂ. 84 ರಲ್ಲಿ ಈಗಾಗಲೇ ಒಣಕಸ ವಿಲೇವಾರಿ ಮಾಡಲಾಗುತ್ತಿದೆ. ಮತ್ತೊಂದು ನಿರ್ಮಾಣಕ್ಕೆ ಸ್ಥಳೀಯರ ವಿರೋಧವೂ ಇದೆ. ಹೀಗಾಗಿ ಹಿಂದಿನ ಸಭೆಯಲ್ಲಿ ಠರಾವು ಮಾಡಲಾಗಿದೆ. ಈಗ ಮತ್ತೆ ಘಟಕ ನಿರ್ಮಾಣಕ್ಕೆ ಅವಕಾಶ ಕೊಟ್ಟಿದ್ದು ಯಾಕೆ? ಸದ್ಯ ಕಾಮಗಾರಿ ನಿಲ್ಲಿಸಲು ಏನು ಬೇಕೋ ಅದನ್ನು ಮಾಡಲೇಬೇಕು ಎಂದು ಪಟ್ಟು ಹಿಡಿದರು.
ಇಂಜಿನಿಯರ್ ಉಮೇಶ ಮಡಿವಾಳ ಪ್ರತಿಕ್ರಿಯಿಸಿ, ಹಸಿಕಸ ವಿಲೇವಾರಿ ಮಾಡದಿರುವ ಷರತ್ತಿನ ಮೇಲೆ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಕೊಟ್ಟಿದ್ದಾರೆ ಎಂದರು.
ಅಧ್ಯಕ್ಷೆ ಸುಮತಿ ಭಟ್ ಮಾತನಾಡಿ, ಸದರಿ ಜಾಗದಲ್ಲಿ ಒಣಕಸ ಮಾತ್ರ ವಿಲೇವಾರಿಗೆ ಅವಕಾಶ ಕೊಡಲಾಗಿದೆ. ಅಲ್ಲಿ ಹಸಿಕಸ ಹಾಕಿದರೆ ತಕ್ಷಣ ಬಂದು ನಿಲ್ಲಿಸುತ್ತೇನೆ. ಚಿತ್ರಗಿ ನಮ್ಮದೇ ಗ್ರಾಮ. ಪಟ್ಟಣದ ತ್ಯಾಜ್ಯ ವಿಲೇವಾರಿ ಸಮಸ್ಯೆ ಹಾಗೂ ಜನರ ಹಿತ ಪರಿಗಣಿಸಬೇಕಾಗುತ್ತದೆ ಎಂದರು.
ಇದೇ ವಿಷಯವಾಗಿ ತಾಸುಗಟ್ಟಲೆ ಮಾತುಕತೆ ನಡೆದರೂ ಬಗೆಹರಿಯದೇ ಇದ್ದಾಗ, ಅಂತಿಮವಾಗಿ ಅಧ್ಯಕ್ಷೆ ಎದುರು ಉಪವಾಸ ಸತ್ಯಾಗ್ರಹದ ನಡೆಸುವುದಾಗಿ ರಾಜೇಶ ಪೈ ಎಚ್ಚರಿಸಿದರು. ಅಂತಿಮವಾಗಿ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ನೀಡಿದ ಅವಕಾಶವನ್ನು ಹಿಂಪಡೆಯುವ ಬಗ್ಗೆ ಎಲ್ಲ ಸದಸ್ಯರ ಸಮ್ಮತಿಯಂತೆ ಠರಾಯಿಸುವ ಬಗ್ಗೆ ಅಧ್ಯಕ್ಷರು ಸೂಚಿಸುವುದರೊಂದಿಗೆ ಸಭೆಯಲ್ಲಿ ಬೇರೆ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಲಾಯಿತು.
ಕಟ್ಟಡ ವಿನ್ಯಾಸ ನಕ್ಷೆಗಳಿಗೆ ಅನುಮೋದನೆ, ಮಹಾಯೋಜನೆಗೆ ಟೆಂಡರ್, ಕಲ್ಸಂಕ ಅಂಗನವಾಡಿಗೆ ಜಾಗ ಮಂಜೂರಿ, ಬೀದಿ ದೀಪಗಳ ನಿರ್ವಹಣೆ ಮುಂತಾದ ವಿಷಯಗಳನ್ನು ಚರ್ಚಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಸೂರ್ಯಕಾಂತ ಗೌಡ ಹಾಗೂ ಇತರ ಸದಸ್ಯರು, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಇನ್ನಿತರರು ಇದ್ದರು.