

ಮೈಸೂರು: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿ ಅವೈಜ್ಞಾನಿಕ ಎಂದು ಆರೋಪಿಸಿ ಲಿಂಗಾಯತ ವೀರಶೈವ ಸಂಘ, ಒಕ್ಕಲಿಗರ ಸಂಘ ಜಂಟಿ ಹೋರಾಟ ಮಾಡುವುದಾಗಿ ಹೇಳಿರುವುದು ಖಂಡನೀಯ. ವರದಿ ಅನುಷ್ಠಾನಕ್ಕೆ ಅಡ್ಡಿ ಉಂಟು ಮಾಡಿದರೆ ಇದಕ್ಕೆ ಪ್ರತಿಯಾಗಿ ಚಳವಳಿ ನಡೆಸಲು ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ನಿರ್ಣಯಿಸಿದೆ.
ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ವತಿಯಿಂದ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ನಮ್ಮ ಅಭಿವೃದ್ಧಿಗೆ ಬಲಿಷ್ಠ ಸಮುದಾಯಗಳು ಏಕೆ ಅಡ್ಡಿ ಬರುತ್ತೀರಿ? ನಾವು ಶೇ.73ರಷ್ಟು ಜನಸಂಖ್ಯೆ ಹೊಂದಿದ್ದು, ನಮ್ಮ ಮುಗ್ಧತೆಯನ್ನು ತಪ್ಪಾಗಿ ತಿಳಿಯಬೇಡಿ. ನಾವೂ ಸಹ ಜಾಗೃತರಾಗಿದ್ದು, ಸಂವಿಧಾನ ನಮ್ಮ ಶಕ್ತಿ ವೃದ್ಧಿಸಿದೆ. ನಾವು ಬೀದಿಗಿಳಿದು ಹೋರಾಟ ಮಾಡುವಂತೆ ಪ್ರಚೋದನಾ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಜಾತಿಗಣತಿಗೆ ಜಾರಿಗೆ ಅಡ್ಡಿ ಮಾಡಬೇಡಿ ಎಂದು ಸಭೆಯ ಮೂಲಕ ಮುಖಂಡರು ಒತ್ತಾಯಿಸಿದರು.
ಜಾತಿ ಗಣತಿ ವರದಿಯು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ಆಶಾಕಿರಣದ ದಾರಿಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳ ಲಾಭ ತಲುಪಲು ಬೇಕಾದ ಮಾಹಿತಿ ಒದಗಿಸುವ ದಾರಿ ದೀಪವಾಗಿದೆ ಎಂದು ಸಭೆಯಲ್ಲಿ ಮುಖಂಡರು ಹೇಳಿದರು.
ಕಾಂತರಾಜು ಆಯೋಗದ ಸದಸ್ಯರಾಗಿದ್ದ ಕೆ.ಎಸ್.ಲಿಂಗಪ್ಪ ಮಾತನಾಡಿ, ವರದಿಯು ವೈಜ್ಞಾನಿಕ ಮತ್ತು ನಿಖರವಾಗಿದೆ. ಅಂಕಿ-ಅಂಶಗಳ ಆಧಾರದಲ್ಲಿ ಉಲ್ಲೇಖಿಸಿ ಪ್ರಮಾಣೀಕರಿಸಲಾಗಿದೆ. ಲಕ್ಷಾಂತರ ಶಾಲಾ ಶಿಕ್ಷಕರು, ಭಾರತ ಎಲೆಕ್ಟ್ರಾನಿಕ್ ಲಿಮಿಟೆಡ್ (ಬಿಇಎಲ್) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ)ನ ನುರಿತ ತಾಂತ್ರಿಕ ತಜ್ಞರು ವರದಿಗೆ ಅಂತಿಮ ರೂಪ ಕೊಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ವರದಿ ಅವೈಜ್ಞಾನಿಕ ಎಂಬುದು ಮೊಸರಲ್ಲಿ ಕಲ್ಲು ಹುಡುಕಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬುಡಕಟ್ಟು, ಅಲೆಮಾರಿಗಳು, ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ಜಾತಿಗಳನ್ನು ಸಮೀಕ್ಷಾ ವರದಿಯಲ್ಲಿ ಗುರುತಿಸಲಾಗಿದೆ. ಇದು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಯಾಗಿದ್ದು, ಮೀಸಲಾತಿ ಹೆಚ್ಚಳಕ್ಕೆ ಸರ್ಕಾರಕ್ಕೆ ಅಗತ್ಯ ಮಾಹಿತಿ ನೀಡುತ್ತದೆ. ಈಗಿರುವ ಶೇ.50ರಿಂದ 75ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ವರದಿ ಸಹಕಾರಿಯಾಗಲಿದೆ ಎಂದರು. ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಇನ್ನಿತರರಿದ್ದರು.