

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಆರಂಭಿಸಿದ್ದ ಹೋರಾಟವನ್ನು ಮತ್ತೆ ಮುಂದುವರಿಸಲು ಮೇ 23ರಂದು ಮಧ್ಯಾಹ್ನ 3 ಗಂಟೆಗೆ ಜೋಯಿಡಾ ತಾಲೂಕಿನ ಸುಕ್ಷೇತ್ರ ಉಳವಿಯಲ್ಲಿ ಹೋರಾಟ ಸಮಿತಿ ಪದಾಧಿಕಾರಿಗಳ ಜತೆಗೆ ಮೀಸಲಾತಿ ಸಂಕಲ್ಪ ರಾಜ್ಯ ಸಭೆ ಕರೆಯಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷಗಟ್ಟಲೆ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳು ಮೀಸಲಾತಿ ನೀಡಿಲ್ಲ. ಇದೇ ಕಾರಣ ಮತ್ತೆ ವಿವಿಧ ಜಿಲ್ಲೆಗಳಲ್ಲಿ ಹೋರಾಟ ನಡೆಸಿ ಕಲ್ಬುಗಿರ್ಯಲ್ಲಿ ಮಾ. 12ರಂದು ಬೃಹತ್ ಸಮಾವೇಶ ಮಾಡಲಾಗಿತ್ತು. ಬಳಿಕ ನೀತಿ ಸಂಹಿತೆ ಜಾರಿಯಾದ ಕಾರಣ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಹೋರಾಟ ಆರಂಭಿಸಲಾಗುವುದು ಎಂದರು.
ಅಂದು ಉಳವಿಯಲ್ಲಿ ಸಭೆ ನಡೆಸಿ ಮೀಸಲಾತಿ ವಿಳಂಬಕ್ಕೆ ಕಾರಣ? ಪರಿಹಾರ ಹೇಗೆ? ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಚಚಿರ್ಸಿ ಮೀಸಲಾತಿ ಪಡೆಯಲು ಸಂಕಲ್ಪ ಮಾಡಲಾಗುವುದು. ಮೇ 24ರಂದು ಬೆಳಗ್ಗೆ 8 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಸಲಾಗುವುದು. ಸಭೆಗೆ ಎಲ್ಲ ಪದಾಧಿಕಾರಿಗಳು, ಸದಸ್ಯರು ಆಗಮಿಸಬೇಕು ಎಂದು ಮನವಿ ಮಾಡಿದರು.
ಉಳವಿ ಸಭೆ ಬಳಿಕ ಜೂನ್ ಅಂತ್ಯದಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು. ಸಭೆಯಲ್ಲಿ ಹಾಲಿ, ಮಾಜಿ ಸಚಿವರು, ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ನಾವು ಹೋರಾಟ ನಡೆಸುತ್ತಿದ್ದರೆ, ಅವರು ವಿಧಾನಸಭೆಯಲ್ಲಿ ಈ ವಿಚಾರವಾಗಿ ಧ್ವನಿ ಎತ್ತುವಂತೆ ಮನವಿ ಮಾಡಲಾಗುವುದು ಎಂದರು.
ಸಮಾಜದ ಮುಖಂಡರಾದ ನಿಂಗಣ್ಣ ಕರಿಕಟ್ಟಿ, ಪ್ರದಿಪ ಪಾಟೀಲ, ಎಸ್.ಬಿ.ಗೋಲಪ್ಪನವರ, ಮಲ್ಲಿಕಾರ್ಜುನ ಭೂಮನಗೌಡ್ರ,ಪ್ರಕಾಶ ಭಾವಿಕಟ್ಟಿ, ಶಶಿಶೇಖರ ಡಂಗನವರ, ರಾಜು ಕೊಟಗಿ, ಮಂಜುನಾಥ ಮುಗ್ಗನವರ, ಮುತ್ತು ಬೆಳ್ಳಕ್ಕಿ, ಗೌರಮ್ಮ ನಾಡಗೌಡರ, ಇತರರು ಇದ್ದರು.