

ಪರಶುರಾಮಪುರ: ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹಾಗೂ ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡುವುದು ಪಾಲಕರು-ಶಿಕ್ಷಕರ ಜವಾಬ್ದಾರಿ ಎಂದು ಜಾಜೂರು ಎಸ್‌ಕೆಡಿಆರ್‌ಡಿಪಿ ವಲಯ ಮೇಲ್ವಿಚಾರಕ ಪ್ರದೀಪ್ ಕುಮಾರ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಇಕೋಕ್ಲಬ್ ಪಗಡಲಬಂಡೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಲ್ಲಿ ಅರಿವು ಮೂಡಿಸುವುದು ಅನಿವಾರ್ಯ ಎಂದರು.
ಯುವ ಪೀಳಿಗೆ ದುರಭ್ಯಾಸಗಳ ದಾಸರಾಗುತ್ತಿದ್ದಾರೆ. ಶಾಲಾ ಹಂತದಲ್ಲಿಯೇ ಇಂತಹ ಕಾರ್ಯಕ್ರಮ ನಡೆಸುವುದರಿಂದ ಅದಕ್ಕೆ ಕಡಿವಾಣ ಹಾಕಬಹುದು ಎಂದು ಅಭಿಪ್ರಾಯಪಟ್ಟರು.
ಆರೋಗ್ಯ ನಿರೀಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ಹದಿ-ಹರೆಯದವರು ದುಶ್ಚಟಗಳನ್ನು ಕಲಿತು ವಿದ್ಯಾರ್ಥಿ ಜೀವನದಲ್ಲಿಯೇ ಹಾಳು ಆಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಂತಹ ಕಾರ್ಯಕ್ರಮ ಹೆಚ್ಚು ಪ್ರಯೋಜನ ಆಗಲಿದೆ ಎಂದರು.
ಮುಖ್ಯಶಿಕ್ಷಕ ಎ.ಷಣ್ಮುಖಪ್ಪ, ಗ್ರಾಮದ ಸೇವಾಪ್ರತಿನಿಧಿ ರೇಣುಕಾ, ಶಿಕ್ಷಕರಾದ ಜೆ.ಎಂ.ವೆಂಕಟೇಶ, ಎಲ್.ಹನುಮಂತರಾಯ, ವೀರೇಶ, ಆರ್.ಮಂಜುಳಾ, ಎಸ್‌ಡಿಎ ಮಂಜುನಾಥ ಇತರರಿದ್ದರು.