ರಸ್ತೆ ಅಭಿವೃದ್ಧಿಗೆ ಅಡ್ಡಿ , ಸ್ಥಳೀಯರಿಂದ ಪ್ರತಿಭಟನೆ

9MDG2
Published on

ಮೂಡಿಗೆರೆ: ತಾಲೂಕಿನ ಕನ್ನಾಪುರ ಗ್ರಾಮದಿಂದ ಚಿಕನಹಳ್ಳಿವರೆಗೆ ಸಾಗುವ ರಾಜ್ಯ ಹೆದ್ದಾರಿ ಸಂಪೂರ್ಣ ಗುಂಡಿಮಯವಾಗಿದ್ದು, ಈ ರಸ್ತೆ ಅಭಿವೃದ್ಧಿಪಡಿಸಲು ಸ್ಥಳೀಯ ವ್ಯಕ್ತಿಯೋರ್ವರು ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಎಇಇ ಚನ್ನಕೇಶವ, ಮೂಡಿಗೆರೆ ಠಾಣೆ ಪಿಎಸ್‌ಐ ಶ್ರೀನಾಥ್ ರೆಡ್ಡಿ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಮುಂದಿನ ಮಂಗಳವಾರ ಎಲ್ಲ ಸಮಸ್ಯೆಗಳನ್ನು ಸರಿಪಡಿಸಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಮಾಜಿ ತಾಪಂ ಅಧ್ಯಕ್ಷ ಗಬ್ಬಳ್ಳಿ ಚಂದ್ರೇಗೌಡ ಮಾತನಾಡಿ, ನೂರಾರು ವರ್ಷದ ಹಿಂದೆ ನಿರ್ಮಿಸಿರುವ ರಾಜ್ಯಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಸ್ಥಳೀಯ ವ್ಯಕ್ತಿಯೋರ್ವರು ಅಡ್ಡಿಪಡಿಸುತ್ತಿದ್ದಾರೆ. ಆ ವ್ಯಕ್ತಿ ರಸ್ತೆ ಬದಿಯ ತೋಟ ಮಾರಾಟ ಮಾಡಿದ್ದಾರೆ. ಬದಿಯಲ್ಲಿರುವ ಮರಗಳು ತನಗೆ ಸೇರಿದ್ದು, ನಿರ್ಮಿಸಿರುವ ಆ ಜಾಗ ಕೂಡ ನನಗೆ ಸೇರಿದೆ. ಅಲ್ಲಿ ರಸ್ತೆ ಅಭಿವೃದ್ಧಿಪಡಿಸಬಾರದು ಎಂದು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಇದರಿಂದ ರಸ್ತೆ ಅಭಿವೃದ್ಧಿ ಸ್ಥಗಿತಗೊಂಡಿದೆ ಎಂದು ಪ್ರತಿಭಟನಾಕಾರರು ದೂರಿದರು.

ರಸ್ತೆಯಲ್ಲಿ ವಿಪರೀತ ಗುಂಡಿಯಾಗಿ ವಾಹನಗಳು ತಿರುಗಾಡುವಂತಿಲ್ಲ. ವಿದ್ಯಾರ್ಥಿಗಳು ಪ್ರತಿದಿನ ತಿರುಗಾಡಲು ವಾಹನಗಳು ಸಿಗುತ್ತಿಲ್ಲ. ಬಾಡಿಗೆ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿಲ್ಲ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ರಸ್ತೆಯನ್ನು ಆವ್ಯಕ್ತಿಯಿಂದ ಬಿಡಿಸಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ಸಚಿನ್, ಶಿವೇಗೌಡ, ರವಿ, ಸಂಗಮಾಪುರ ರಾಜೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net